ಬೊಮ್ಮನಹಳ್ಳಿ: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಹೈ ಫೈ ಮೊಬೈಲ್ ಜಾಮರ್‌ನಿಂದಾಗಿ ಸುತ್ತಲಿನ 2 ಕಿ.ಮೀ. ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ, ಇದರಿಂದ ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಪರಪ್ಪನ ಅಗ್ರಹಾರದ ಸುತ್ತಮುತ್ತಲಿನ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
‘ಡಿಜಿಟಲ್ ಯುಗದಲ್ಲಿ ಬಹುತೇಕ ವ್ಯಾಪಾರ–ವಹಿವಾಟು ಆನ್‌ಲೈನ್ ಮೂಲಕವೇ ನಡೆಯುತ್ತಿದೆ, ನಗದು ವ್ಯವಹಾರ ಕಡಿಮೆ ಆಗಿದೆ. ಜಾಮರ್ ಅಳವಡಿಕೆಯಿಂದ ಎರಡು ತಿಂಗಳಿನಿಂದ ನೆಟ್‌ವರ್ಕ್ ಸಮಸ್ಯೆಯಾಗಿದ್ದು, ನಿತ್ಯದ ಕೆಲಸಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಜೈಲಿನ ಅಧಿಕಾರಿಗಳಿಗೆ, ಎಡಿಜಿಪಿ ಮತ್ತು ಡಿಐಜಿ ಅವರಿಗೆ ಪತ್ರ ಮುಖೇನ ಮನವಿ ಮಾಡಲಾಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಲಕ್ಷ್ಮಣ್ ದೂರಿದರು.
‘ಟ್ಯಾಕ್ಸಿ ಬುಕ್ ಮಾಡಲು ಆಗುತ್ತಿಲ್ಲ. ಆಧಾರ್, ಸೇವಾಸಿಂಧು ಮತ್ತು ಇತರೆ ಆನ್‌ಲೈನ್ ಮೂಲಕ ಪಡೆಯುವ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಒಟಿಪಿ ಕಡ್ಡಾಯವಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಒಟಿಪಿಯೂ ಬರುತ್ತಿಲ್ಲ. ಇದರಿಂದ ರೋಸಿ ಹೋಗಿದ್ದೇವೆ. ಜೈಲಿನ ಒಳಗೆ ಸಂಪರ್ಕ ನಿಯಂತ್ರಿಸುವಂತೆ ಜಾಮರ್ ಅಳವಡಿಸಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಆದರೆ ಕೈದಿಗಳ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ?’ ಎಂದು ಭುವನೇಶ್ವರಿ ನಗರ ನಿವಾಸಿ ಶೇಖರ್ ರೆಡ್ಡಿ ಪ್ರಶ್ನಿಸಿದರು.
‘ಜೈಲಿನ ಒಳಗೆ ಕೈದಿಗಳಿಗೆ ಮೊಬೈಲ್ ಮತ್ತು ಸಿಮ್ ಸಿಗದಂತೆ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕು, ಬದಲಾಗಿ, ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಯಾವ ನ್ಯಾಯ’ ಎನ್ನುತ್ತಾರೆ ನೀರಿನ ವ್ಯಾಪಾರಿ ಗೌರಮ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.