ADVERTISEMENT

ಮಗುವಿನ ಬಟ್ಟೆ ಮೇಲೆ ನಟ ದರ್ಶನ್ ಕೈದಿ ಸಂಖ್ಯೆ: ಪೊಲೀಸರಿಗೆ ಆಯೋಗದಿಂದ ದೂರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:41 IST
Last Updated 4 ಜುಲೈ 2024, 15:41 IST
<div class="paragraphs"><p>ದರ್ಶನ್‌&nbsp;&nbsp;</p></div>

ದರ್ಶನ್‌  

   

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ನೀಡಿರುವ ಕೈದಿ ಸಂಖ್ಯೆಯನ್ನು ಬರೆದಿರುವ ಬಟ್ಟೆಯನ್ನು ಧರಿಸಿ ಮಗುವಿನ ಫೋಟೊಶೂಟ್‌ ಮಾಡಿಸಿದ ಪೋಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಐಡಿ ಸೈಬರ್‌ ಅಪರಾಧ ವಿಭಾಗಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದೆ.

ನಟ ದರ್ಶನ್‌ ಅವರು ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಅವರ ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ಜೈಲು ಕೈದಿಗಳು ಧರಿಸುವ ಬಟ್ಟೆ ಹಾಕಿ, ಅದರ ಮೇಲೆ ದರ್ಶನ್‌ ಕೈದಿ ಸಂಖ್ಯೆ 6106 ಸ್ಟಿಕ್ಕರ್‌ ಅಂಟಿಸಿ, ಫೋಟೊಶೂಟ್‌ ಮಾಡಿಸಿದ್ದಾರೆ. ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದೆ. ಆದ್ದರಿಂದ, ಫೋಟೊಶೂಟ್‌ ಮಾಡಿಸಿದವರ ಪತ್ತೆ ಮಾಡಿ, ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸರಿಗೆ ಆಯೋಗ ಸೂಚಿಸಿದೆ.

ADVERTISEMENT

‘ಮಕ್ಕಳು ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪು ಮಾಡಿದಾಗಲೂ ನಾವು ಅವರನ್ನು ಆರೋಪಿಗಳು ಅಥವಾ ಅಪರಾಧಿಗಳೆಂದು ಕರೆಯುವಂತಿಲ್ಲ. ‘ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಎಂದಷ್ಟೇ ಕರೆಯುತ್ತೇವೆ’. ಮಕ್ಕಳಿಗೆ ಒಳ್ಳೆಯ ವಾತಾವರಣ ನೀಡಬೇಕೆ ವಿನಾ ನಮ್ಮ ಅಭಿಮಾನ, ದುರಾಭಿಮಾನಗಳನ್ನು ಮಕ್ಕಳ ಮೇಲೆ ಹೇರಬಾರದು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ‘ಚಿಕ್ಕ ಮಗುವಿನ ಫೋಟೊಶೂಟ್‌ ಮಾಡಿರುವುದು ಬಾಲನ್ಯಾಯ ಕಾಯ್ದೆ–2015ರ ಸೆಕ್ಷನ್‌ 74ರ ಸ್ಪಷ್ಟ ಉಲ್ಲಂಘನೆ. ಆದ್ದರಿಂದ, ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಆರೋಪ ಸಾಬೀತಾದರೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ ₹2 ಲಕ್ಷದವರೆಗೆ ದಂಡ ವಿಧಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.