ಬೆಂಗಳೂರು: ಉದ್ಯಾನ ನಿರ್ಮಿಸುವುದಾಗಿ ನಕ್ಷೆಯಲ್ಲಿ ತೋರಿಸಿದ್ದ ಬಿಡಿಎ, ನಿವೇಶನಗಳ ಹಂಚಿಕೆಯಾದ ಮೇಲೆ ಸ್ಮಶಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಈಗಲೂ ಇಲ್ಲಿ ಶವಗಳನ್ನು ಹೂಳುತ್ತಿದ್ದು, ನಿವೇಶನದಾರರು ಮನೆ ಕಟ್ಟಿಕೊಳ್ಳದೆ ಕಂಗಾಲಾಗಿದ್ದಾರೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ನಲ್ಲಿ 6 ಮತ್ತು 18ನೇ ಸಂಖ್ಯೆಯ ನಾಗರಿಕ ಸೌಲಭ್ಯಗಳ ನಿವೇಶನಗಳಲ್ಲಿ ಉದ್ಯಾನ ನಿರ್ಮಿಸುವುದಾಗಿ ಬಿಡಿಎ ಬಡಾವಣೆ ನಕ್ಷೆಯಲ್ಲಿ ಸ್ಪಷ್ಟವಾಗಿ ನಮೂದಿಸಿದೆ. ಆದರೆ, ‘ಬಿಡಿಎ’ ಎಂದು ಗೇಟ್ ಹಾಕಿರುವುದು ಬಿಟ್ಟರೆ ಉಳಿದ ಯಾವ ಕೆಲಸವೂ ಇಲ್ಲಿ ಆಗಿಲ್ಲ. ಇಲ್ಲಿ ಶವಗಳನ್ನು ಹೂಳಲಾಗುತ್ತಿದೆ. ಅವುಗಳ ಮೇಲೆ ಸ್ಮಾರಕವನ್ನೂ ಕಟ್ಟಲಾಗುತ್ತಿದೆ. ಸುತ್ತಮುತ್ತ ವಾಸಿಸುತ್ತಿರುವವರು ಇದರಿಂದ ಭಯಗೊಂಡಿದ್ದಾರೆ. ನಿವೇಶನಗಳಿರುವವರು ಮನೆ ಕಟ್ಟಲು ಹಿಂಜರಿಯುತ್ತಿದ್ದಾರೆ.
ಸ್ಮಶಾನದ ಮುಂದೆ ಅಥವಾ ಅಕ್ಕಪಕ್ಕ ಮನೆ ನಿರ್ಮಿಸಲು ಸಹಜವಾಗಿ ಯಾರೂ ಮುಂದಾಗುವುದಿಲ್ಲ. ಹಲವು ವರ್ಷಗಳ ಬಳಿಕ ಬಿಡಿಎ ನಿವೇಶನ ದೊರೆತ ಸಂತಸದಲ್ಲಿದ್ದ ನಾಗರಿಕರಿಗೆ, ಮನೆ ಕಟ್ಟಲು ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಎದುರಿಗೆ ‘ಹೊಸ ಸ್ಮಾರಕ’ಗಳು ತಲೆ ಎತ್ತಿರುವುದು ನಡುಕ ಉಂಟುಮಾಡಿದೆ.
‘ಉದ್ಯಾನದ ಎದುರು ನಿವೇಶನ ಸಿಕ್ಕಿದೆ ಎಂದು ಖುಷಿಯಲ್ಲಿದ್ದೆವು. ಆದರೆ, ಕೆಲವು ವರ್ಷಗಳ ಹಿಂದೆ ಮನೆ ಕಟ್ಟಲು ಮುಂದಾದಾಗ ಅಲ್ಲಿ ಸ್ಮಶಾನ ಇತ್ತು. ಹೊಸದಾಗಿ ಶವಗಳನ್ನು ಹೂಳಲಾಗುತ್ತಿತ್ತು. ಈ ಬಗ್ಗೆ ಬಿಡಿಎ ಎಂಜಿನಿಯರ್‌ಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡಿದರು. ದೂರು ನೀಡಲು ಹೋದರೆ ಸ್ಥಳೀಯ ಎಂಜಿನಿಯರ್‌ಗಳು ತೆಗೆದುಕೊಳ್ಳುವುದಿಲ್ಲ. ಸ್ಮಶಾನದ ಮುಂದೆ ಮನೆ ನಿರ್ಮಿಸಲು ಕುಟುಂಬದವರು ಒಪ್ಪುತ್ತಿಲ್ಲ. ಮಕ್ಕಳು ಹೆದರುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೇಶನದ ಮಾಲೀಕರೊಬ್ಬರು ಹೇಳಿದರು.
‘ಉದ್ಯಾನ ನಿರ್ಮಾಣವಾಗುತ್ತದೆ ಎಂಬ ಸಂತಸದಲ್ಲಿದ್ದ ನಮಗೆ ಬಿಡಿಎ ಎಂಜಿನಿಯರ್‌ಗಳ ಮಾತಿನಿಂದ ಭಯ ಉಂಟಾಗಿದೆ. ಸ್ಥಳೀಯರ ಒತ್ತಾಯದಿಂದ ಸ್ಮಶಾನವನ್ನೇ ಉಳಿಸುತ್ತೇವೆ ಎನ್ನುತ್ತಿದ್ದಾರೆ. ಈ ನಿವೇಶನ ಬೇಡ, ಮಾರಾಟ ಮಾಡಿ ಅದೇ ಬೆಲೆಗೆ ಬೇರೆಡೆ ಖರೀದಿ ಮಾಡೋಣ ಎಂದರೆ ಯಾರೂ ಖರೀದಿಗೆ ಮುಂದಾಗುತ್ತಿಲ್ಲ. ಕೆಲವು ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ’ ಎಂದು ಮತ್ತೊಬ್ಬ ನಿವೇಶನದಾರರು ಅಳಲು ತೋಡಿಕೊಂಡರು.
ಉದ್ಯಾನವಾಗಿಯೇ ಅಭಿವೃದ್ಧಿ ಮಾಡಿ...
‘ಕೆಲವು ಗ್ರಾಮಸ್ಥರು ಸ್ಮಶಾನ ಎಂದು ಹೇಳಿಕೊಂಡು ಶವಗಳನ್ನು ಹೂಳುತ್ತಿದ್ದಾರೆ. ಬಿಡಿಎ ಒಂದು ಬಾರಿ ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಉಳಿಸಿಕೊಳ್ಳುವ ಬಗ್ಗೆ ನಕ್ಷೆಯಲ್ಲೇ ತಿಳಿಸಬೇಕು. ಈಗ ಹಿಂದೆ ಇತ್ತು ಎಂದರೆ ಈಗ ನಿವೇಶನದಾರರಿಗೆ ತೊಂದರೆಯಾಗುತ್ತಿದೆ. ಮಕ್ಕಳು ಹಾಗೂ ಮಹಿಳೆಯರು ಭಯಗೊಂಡಿದ್ಧಾರೆ. ಬಿಡಿಎಗೆ ಅಷ್ಟು ಆಸಕ್ತಿ ಇದ್ದರೆ ಬೇರೆ ಕಡೆ ‘ಸ್ಮಶಾನ’ಕ್ಕೆ ಜಾಗ ಮಾಡಿಕೊಡಲಿ. ಬಡಾವಣೆ ಮಧ್ಯೆ ಇದೆಲ್ಲ ಇರಬಾರದು. ಕೂಡಲೇ ಈ ಪ್ರದೇಶವನ್ನು ಉದ್ಯಾನವನ್ನಾಗಿಯೇ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಡಿ.ಎಸ್. ಗೌಡ ಆಗ್ರಹಿಸಿದರು.
ನಕ್ಷೆಯಲ್ಲೇ ತೋರಿಸಬೇಕು...
‘ಹಿಂದೆ ಇದ್ದ ಸ್ಮಶಾನವನ್ನು ಮುಂದುರಿಸಬೇಕಾದರೂ ಅದನ್ನು ನಕ್ಷೆಯಲ್ಲಿ ತೋರಬೇಕು. ನಕ್ಷೆಯಲ್ಲಿ ತೋರಿಸದೆ ಇದ್ದು ಸ್ಥಳೀಯರ ಒತ್ತಾಯಕ್ಕೆ ಮಣಿದು ಸ್ಮಶಾನ ಉಳಿಸುತ್ತೇವೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಲಾಗದು’ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಹೇಳಿದರು. ಬಿಡಿಎ ಬೈಲಾದ 4.12.1 ಮತ್ತು 4.12.2ನಲ್ಲಿ ಪಾರ್ಕ್ ಹಾಗೂ ತೆರೆದ ಪ್ರದೇಶಗಳ ಉಪಯೋಗದ ಬಗ್ಗೆ ಉಲ್ಲೇಖಿಸಲಾಗಿದೆ. ಮೈದಾನ ಕ್ರೀಡಾಂಗಣ ಉದ್ಯಾನ ಈಜುಕೊಳ ಸ್ಮಶಾನಕ್ಕೆ ಬಳಸಿಕೊಳ್ಳಬಹುದು. ಆದರೆ ನಕ್ಷೆಯಲ್ಲಿ ಅದನ್ನು ನಮೂದಿಸಬೇಕು ಎಂದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಸ್ಥಳೀಯರು ಕೇಳಿದರು ಬಿಟ್ಟಿದ್ದೇವೆ...
‘30–35 ವರ್ಷಗಳಿಂದ ನಾವು ಇಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ನಮಗೆ ಇಲ್ಲೇ ಅವಕಾಶ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರಿಂದ ಬಿಡಿಎ ಆ ಜಾಗವನ್ನು ಸ್ಮಶಾನವಾಗಿ ಬಿಟ್ಟಿದೆ. ಅದನ್ನೇ ಅಭಿವೃದ್ಧಿ ಮಾಡಿ ಶವಗಳನ್ನು ಹೂಳಲು ಅವಕಾಶ ಮಾಡಿಕೊಡಲಾಗುವುದು. ಈ ಜಾಗವನ್ನು ಬಿಡಿಎ ತೋಟಗಾರಿಕೆ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು ಅವರು ಸ್ಮಶಾನಕ್ಕಾಗಿ ಅಭಿವೃದ್ಧಿ ಮಾಡಿಕೊಡುತ್ತಾರೆ’ ಎಂದು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಭುಲಿಂಗಯ್ಯ ತಿಳಿಸಿದರು. ‘ಎಂಜಿನಿಯರಿಂಗ್ ವಿಭಾಗದಿಂದ ನಮಗೆ ಈ ಜಾಗವನ್ನು ಹಸ್ತಾಂತರಿಸಿಲ್ಲ’ ಎಂದು ತೋಟಗಾರಿಕೆ ವಿಭಾಗದ ಅಧಿಕಾರಿಗಳು ಹೇಳಿದರು.
ಗೋಮಾಳ: ಪರಿಹಾರ ನೀಡಿಲ್ಲ...
ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ನಲ್ಲಿ ‘ಪಾರ್ಕ್ 6’ ಎಂದು ನಮೂದಿಸಲಾಗಿದೆ. ಉದ್ಯಾನವಾಗಿ ಅದನ್ನು ಅಭಿವೃದ್ಧಿಪಡಿಸಲು ಈ ಹಿಂದೆಯೇ ಎಂಜಿನಿಯರಿಂಗ್ ವಿಭಾಗದಿಂದ ಬೇಲಿ ಹಾಕಿ ಗೇಟ್ ಅಳವಡಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ನಿವೇಶನಗಳನ್ನು ಹಂಚಲಾಗಿದೆ. ಇಲ್ಲಿ ಶವಗಳನ್ನು ಹೂಳಲಾಗುತ್ತಿದೆ ಎಂದು ಸುತ್ತಮುತ್ತಲಿನ ನಿವೇಶನಗಳ ಮಾಲೀಕರು ಸಾಕಷ್ಟು ದೂರು ಕೊಟ್ಟಿದ್ದಾರೆ. ಇದರ ಬಗ್ಗೆ ಜಂಟಿ ಸರ್ವೆ ನಡೆಸಲಾಗಿದ್ದು ಇದರ ಕಡತ ಎಎಲ್‌ಎಒ ಬಳಿ ಬಾಕಿ ಉಳಿದಿದೆ. ಭೂಸ್ವಾಧೀನದ ದಾಖಲೆಗಳ ಪ್ರಕಾರ ಈ ಭೂಮಿ ಗೋಮಾಳವಾಗಿದ್ದು ಯಾವುದೇ ಪರಿಹಾರವನ್ನೂ ನೀಡಲಾಗಿಲ್ಲ‘ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.