ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಮತ್ತು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಎದುರಿಸುತ್ತಿರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ಪದಾಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ಆಸ್ಪತ್ರೆಗಳ ವ್ಯವಸ್ಥಾಪಕರ ಜತೆ ಸೋಮವಾರನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ (ಒಪಿಡಿ) ತಪಾಸಣೆಗೆ ಬರುವ ‘ಐಎಲ್‌ಐ’ ಮತ್ತು ‘ಸಾರಿ’ ರೋಗಿಗಳಿಗೆ ಪರೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ನಗರದಲ್ಲಿ ಕೋವಿಡ್ ಸೋಂಕು ಹರಡಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಸ್ಪತ್ರೆಗೆ ಬರುವ ಎಲ್ಲರೂ ಲಸಿಕೆ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರದಲ್ಲಿ ಸದ್ಯ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿವೆ. ಸರ್ಕಾರದ ಹಿಂದಿನ ಅದೇಶದಂತೆ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿಹಾಸಿಗೆಗಳನ್ನು ಮೀಸಲಿಡಲು ಸಿದ್ಧರಾಗಿರಬೇಕು. ಅಲ್ಲದೆ ಮಕ್ಕಳ ಚಿಕಿತ್ಸೆಗಾಗಿಯೂ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.