ಬೆಂಗಳೂರು: ‘ಸಣ್ಣ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮ ಜಾಗೃತಗೊಳಿಸುವಂತಹ ಪಾಠಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು’ ಎಂದು ಲೇಖಕ ಹಾಗೂರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಚಂದ್ರಶೇಖರ ಭಂಡಾರಿ ಆಗ್ರಹಿಸಿದರು.
ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನದ ದೇಶ ಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ‘ರಾಷ್ಟ್ರ ಜಾಗೃತಿ ನಿರಂತರ ಪ್ರಕ್ರಿಯೆ. ಮನೆ ಹಾಗೂ ಶಾಲೆಯ ಹಂತದಲ್ಲಿಯೇ ದೇಶ ಭಕ್ತಿಯನ್ನು ಬೆಳೆಸುವ ಪ್ರಯತ್ನಗಳು ನಡೆಯಬೇಕು.ಪಠ್ಯದಲ್ಲಿಯೂ ದೇಶದ ಬಗ್ಗೆ ಅಭಿಮಾನ ಬೆಳೆಸುವ ಪಾಠಗಳು ಇರಬೇಕು’ ಎಂದು ಹೇಳಿದರು.
ಮೈಸೂರಿನ ರಾಮಕೃಷ್ಣ ಆಶ್ರಮದಮುಕ್ತಿದಾನಂದ ಸ್ವಾಮೀಜಿ, ‘ರಾಷ್ಟ್ರ ಪ್ರೇಮ ಉಚ್ಚಮಟ್ಟದ ಭಾವ. ಇದನ್ನು ಜಾಗೃತಗೊಳಿಸುವ ಕೆಲಸ ಎಲ್ಲೆಡೆ ಸತತವಾಗಿ ನಡೆಯಬೇಕು. ಧಮನಿ ಧಮನಿಗಳಲ್ಲಿ ರಾಷ್ರ ಪ್ರೇಮ ಜಾಗೃತ ಆಗಬೇಕು.ಸ್ವಾಮಿ ವಿವೇಕಾನಂದರು ರಾಷ್ಟ್ರ ಜಾಗೃತಿಗೆ ಶ್ರಮಿಸಿದರು. ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿ ಹಲವರು ರಾಷ್ಟ್ರ ಜಾಗೃತಿ ಯಜ್ಞದಲ್ಲಿ ಪಾಲ್ಗೊಂಡಿದ್ದರು. ದೇಶ ಭಕ್ತಿ ಹಾಗೂ ರಾಷ್ಟ್ರದ ಬಗೆಗಿನ ಜ್ಞಾನ ಹೆಚ್ಚಿಸುವ ಕೆಲಸಗಳನ್ನು ಆಡಳಿತಾರೂಢ ಸರ್ಕಾರಗಳು ಮಾಡಬೇಕು’ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕಿತೇಜಸ್ವಿನಿ ಅನಂತಕುಮಾರ್, ‘ವಂದೇ ಮಾತರಂ ಎಂಬ ಎರಡು ಪದಗಳು ರಾಷ್ಟ್ರ ಭಕ್ತಿ ಹೆಚ್ಚಿಸುತ್ತವೆ. ಸಂಪದ್ಭರಿತವಾಗಿದ್ದ ನಮ್ಮ ದೇಶವನ್ನುಮೊಘಲರು, ಪೋರ್ಚುಗೀಸರು, ಡಚ್ಚರು ಹಾಗೂ ಬ್ರಿಟಿಷರು ಲೂಟಿ ಮಾಡಿದರು.ದಾಸ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರವನ್ನು ಮೀರಿ ದೇಶ ಬೆಳೆದಿದೆ. ನಮ್ಮಲ್ಲಿನ ವೇದ, ಉಪನಿಷತ್ತುಗಳನ್ನು ಓದಲು ಒಂದು ಜನ್ಮ ಸಾಕಾಗುವುದಿಲ್ಲ. ದೇಶ ಮತ್ತೆ ವಿಶ್ವಗುರುವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ’ ಎಂದರು.
ಸ್ವೇಚ್ಛೆಯಾಗುತ್ತಿದೆ ಸ್ವಾತಂತ್ರ್ಯ: ಗಾಯಕಿಅರ್ಚನಾ ಉಡುಪ, ‘ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಜಾಗೃತ ಆಗಬೇಕು. ಲಕ್ಷಾಂತರ ಸೈನಿಕರು ಸದ್ದಿಲ್ಲದೆ ನಮಗಾಗಿ ಜೀವ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛೆಯಾಗುತ್ತಿದೆ. ಗುರು–ಶಿಷ್ಯ ಪರಂಪರೆ ಮರೆಯಾಗುತ್ತಿದೆ. ಎಲ್ಲವೂ ನಮ್ಮ ಇಷ್ಟದಂತೆ ನಡೆಯಬೇಕು ಎನ್ನುವ ಮನೋಭಾವವನ್ನು ಹೆಚ್ಚಿನವರು ಬೆಳೆಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
ಅಭಿಯಾನದ ಆಯೋಜಕರವಿ ಹೊಯ್ಸಳ, ‘ರಾಷ್ಟ್ರಗೀತೆಯನ್ನು ಬೇರೆ ದೇಶಗಳಲ್ಲಿ ಎಲ್ಲರೂ ಎಲ್ಲ ಅವಧಿಯಲ್ಲಿ ಹಾಡುವಂತಿಲ್ಲ. ನಮ್ಮ ದೇಶದಲ್ಲಿ ಮಾತ್ರ ಎಲ್ಲರಿಗೂ ಹಾಡಲು ಅವಕಾಶವಿದೆ. ಆದರೆ, ಬಹುತೇಕರಿಗೆ ರಾಷ್ಟ್ರಗೀತೆ ಪೂರ್ತಿಯಾಗಿ ಹಾಡಲು ಬರುವುದಿಲ್ಲ. ಶಾಲಾ ಅವಧಿಯಲ್ಲಿ ಹಾಡುವ ರಾಷ್ಟ್ರಗೀತೆಯನ್ನು ದೊಡ್ಡವರಾದಂತೆ ಮರೆಯುತ್ತಾರೆ. ಇದು ನಾವು ನಡೆಸಿದ ಸಮೀಕ್ಷೆಯೊಂದರಲ್ಲಿ ದೃಢಪಟ್ಟಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.