ADVERTISEMENT

ಹಣ ದುರುಪಯೋಗ ಸಾಬೀತು: ಬ್ಯಾಂಕ್‌ ನಿವೃತ್ತ ಅಧಿಕಾರಿಗಳು ಸೇರಿ ನಾಲ್ವರಿಗೆ ಜೈಲು

ಪಿಇಸಿ ಕಂಪನಿಯ ₹10 ಕೋಟಿ ದುರುಪಯೋಗ ಸಾಬೀತು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:27 IST
Last Updated 1 ಜುಲೈ 2024, 15:27 IST
   

ಬೆಂಗಳೂರು: ‘₹10 ಕೋಟಿ ದುರುಪಯೋಗ ಪಡಿಸಿಕೊಂಡಿದ್ದ ಫೆಡರಲ್‌ ಬ್ಯಾಂಕ್‌ನ ಇಬ್ಬರು ನಿವೃತ್ತ ಅಧಿಕಾರಿಗಳು, ಪಿಇಸಿ ಕಂಪನಿಯ ಮಾಜಿ ವ್ಯವಸ್ಥಾಪಕ ಸೇರಿ ನಾಲ್ವರು ಅಪರಾಧಿಗಳು ಎಂದು ಸಾರಿರುವ ಇಲ್ಲಿನ 3ನೇ ಎಸಿಎಂಎಂ ನ್ಯಾಯಾಲಯ, ನಾಲ್ವರಿಗೂ 4 ವರ್ಷ ಕಠಿಣ ಸಜೆ ಹಾಗೂ ತಲಾ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಪಿಇಸಿ ಕಂಪನಿ ಬೆಂಗಳೂರು ಶಾಖೆಯ ಮಾಜಿ ವ್ಯವಸ್ಥಾಪಕ ಶೈಲೇಂದ್ರ ಎಂ.ದೊಂಗರವಾರ್‌, ಕಂಪನಿಯ ಕಾರ್ಯನಿರ್ವಾಹಕ ಸಹಾಯಕ ಕೆ.ರಾಜೇಂದ್ರನ್‌, ಜೆ.ಸಿ.ರಸ್ತೆಯ ಫೆಡರಲ್‌ ಬ್ಯಾಂಕ್‌ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಮೊಹಮ್ಮದ್‌ ನಂಬಿಯಾರ್‌ ಹಾಗೂ ಇದೇ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕ ಸಿ.ಎಂ. ಜಾನ್‌ ಅವರಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶ ಶ್ರೇಯಾಂಶ್‌ ದೊಡ್ಡಮನಿ ಅವರು ಆದೇಶಿಸಿದ್ದಾರೆ. ಪ್ರಕರಣದ 1ನೇ ಅಪರಾಧಿ ಪರ್ವೇಜ್ ಅಹಮ್ಮದ್‌ ವಿಚಾರಣೆ ಹಂತದಲ್ಲಿ ಮೃತಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಪಿಇಸಿ ಕಂಪನಿಯ ಮೂಲಕ 2005ರಲ್ಲಿ ಪರ್ವೇಜ್ ಅಹಮದ್‌ ಅವರು ವಿದೇಶದಿಂದ ಚಿನ್ನದ ಗಟ್ಟಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ದೆಹಲಿಯ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಪಿಇಸಿ ಕಂಪನಿಯವರು ಜಾಮೀನುದಾರರಾಗಿ ಈ ವ್ಯವಹಾರ ನಡೆಸುತ್ತಿದ್ದರು.

ADVERTISEMENT

ಆಮದು ಮಾಡಿಕೊಂಡ ಚಿನ್ನವನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಲಾಗುತ್ತಿತ್ತು. ಚಿನ್ನವನ್ನು ಬೆಂಗಳೂರಿನ ಐಡಿಬಿಐ ಬ್ಯಾಂಕ್‌ ಲಾಕರ್‌ನಲ್ಲಿಟ್ಟು ಪಿಇಸಿ ಕಂಪನಿ ಬೆಂಗಳೂರು ಶಾಖೆ ವ್ಯವಸ್ಥಾಪಕರ ಮೂಲಕ ವ್ಯಾಪಾರಿಗಳಿಗೆ ನೀಡಲಾಗುತ್ತಿತ್ತು.

ವ್ಯಾಪಾರಿಗಳು ಚಿನ್ನವನ್ನು ಪಡೆದುಕೊಳ್ಳಲು ಚಿನ್ನದ ಪೂರ್ಣ ಮೌಲ್ಯದಷ್ಟು ಮೊತ್ತವನ್ನು ನಗರದ ಜೆ.ಸಿ. ರಸ್ತೆಯ, ಫೆಡರಲ್‌ ಬ್ಯಾಂಕ್‌ನಲ್ಲಿ ಪಿಇಸಿ ಹೆಸರಿನಲ್ಲಿ ಮೂರು ತಿಂಗಳಿಗೆ ನಿಶ್ಚಿತ ಠೇವಣಿ ಇಡಬೇಕಿತ್ತು. ಠೇವಣಿ ರಶೀದಿಯನ್ನು ಪಿಇಸಿ ಕಂಪನಿಯ ವ್ಯವಸ್ಥಾಪಕರಿಗೆ ನೀಡಿ ವ್ಯಾಪರಸ್ಥರು ಚಿನ್ನ ಬಿಡಿಸಿಕೊಳ್ಳುತ್ತಿದ್ದರು. ಮೂರು ತಿಂಗಳ ಬಳಿಕ ನಿಶ್ಚಿತ ಠೇವಣಿ ಬಿಡಿಸಿಕೊಳ್ಳಲು ಫೆಡರಲ್‌ ಬ್ಯಾಂಕ್‌ಗೆ ಕಳುಹಿಸಲಾಗಿತ್ತು. ಆಗ ಐವರು ಅಪರಾಧಿಗಳು ಆ ಹಣವನ್ನು ಬ್ಯಾಂಕ್‌ನಿಂದ ಪಡೆದು ಕಂಪನಿಗೆ ಕಳುಹಿಸದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಪ್ರಕಟಿಸಿದೆ.

ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ವಕೀಲರಾಗಿ ಬಿ.ಅಣ್ಣೇಗೌಡ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.