ಪೀಣ್ಯ ದಾಸರಹಳ್ಳಿ: ‘ನಮ್ಮ ಕ್ಷೇತ್ರದ ಪಾಲಿನ 20 ಎಂಎಲ್‌ಡಿ ನೀರನ್ನು ಯಲಹಂಕ ಕ್ಷೇತ್ರಕ್ಕೆ ಹರಿಸಿ, ಈ ಕ್ಷೇತ್ರದಲ್ಲಿ ನೀರಿನ ಹಾಹಾಕಾರಕ್ಕೆ ಕಾರಣವಾಗಿರುವ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಆಗ್ರಹಿಸಿದರು.
ಹೆಗ್ಗನಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ 48 ಎಂಎಲ್ ನೆಲಮಟ್ಟದ ಜಲಸಂಗ್ರಹಾರಕ್ಕೆ ಬುಧವಾರ ಜಲ ಮಂಡಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರಧಾನ ಎಂಜಿನಿಯರ್ ಸುರೇಶ್ ಅವರು, ಹೆಗ್ಗನಹಳ್ಳಿಯ ಜಲಸಂಗ್ರಹಾರಕ್ಕೆ ಬರಬೇಕಾದ ನೀರನ್ನು, ಸಿಂಗಾಪುರದ ಜಲಸಂಗ್ರಹಾರಕ್ಕೆ ಹರಿಸಿದ್ದಾರೆ. ಇದರಿಂದಾಗಿ ಹೆಗ್ಗನಹಳ್ಳಿಯ ಜನರಿಗೆ ಅನ್ಯಾಯ ಎಸಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಮಂಡಳಿ ಪಶ್ಚಿಮ ವಿಭಾಗದ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಮಾತನಾಡಿ, ‘ನೀರು ಪೂರೈಕೆಯಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ ಆಗುತ್ತಿರುವ ವ್ಯತ್ಯಾಸವನ್ನು ಪರಿಶೀಲಿಸಿದ್ದೇವೆ. ಈ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾವೇರಿ 5ನೇ ಹಂತ ಬರಲಿದ್ದು, ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.