ADVERTISEMENT

ದೇಶದ ಔಷಧೋದ್ಯಮ 3 ವರ್ಷಗಳಲ್ಲಿ ಸ್ವಾವಲಂಬಿ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 18:11 IST
Last Updated 27 ಫೆಬ್ರುವರಿ 2021, 18:11 IST
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜನೌಷಧಿ ಮಳಿಗೆ ಉದ್ಘಾಟಿಸಿ, ಔಷಧ ಪರಿಶೀಲಿಸಿದರು. ಮಾಜಿ ಶಾಸಕ ಎಸ್.ಮುನಿರಾಜು, ಕಿರಣ್ ಇದ್ದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜನೌಷಧಿ ಮಳಿಗೆ ಉದ್ಘಾಟಿಸಿ, ಔಷಧ ಪರಿಶೀಲಿಸಿದರು. ಮಾಜಿ ಶಾಸಕ ಎಸ್.ಮುನಿರಾಜು, ಕಿರಣ್ ಇದ್ದರು.   

ಪೀಣ್ಯ ದಾಸರಹಳ್ಳಿ: ‘ಎಲ್ಲ ನಮೂನೆಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಚಿಕ್ಕಬಾಣಾವರದ ಆರ್.ಆರ್. ಇನ್‌ಸ್ಟಿಟ್ಯೂಟ್‌ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ‘ದೇಶವು ಜೆನರಿಕ್ ಔಷಧ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದರು.

‘ಕೋವಿಡ್ ಸಂದರ್ಭದಲ್ಲೂ ಜಗತ್ತಿನ 120 ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮಾಲ್ ಮುಂತಾದ ಮಾತ್ರೆಗಳನ್ನು ಪೂರೈಸಿದೆವು. ಆದರೆ ಬಹುತೇಕ ಔಷಧ ಉತ್ಪಾದನೆಗೆ ಬೇಕಾಗುವ ಮೂಲ ರಾಸಾಯನಿಕಗಳಿಗಾಗಿ (ಎಪಿಐ, ಕೆಎಸ್ಎಂ ಮುಂತಾದವು) ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದ್ದೇವೆ’ ಎಂದರು.

ADVERTISEMENT

‘ಈವರೆಗೆ ದೇಶದ 734 ಜಿಲ್ಲೆಗಳಲ್ಲಿ 7,500 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಬಡವರ ಅನುಕೂಲಕ್ಕಾಗಿ ಜನೌಷಧಿ ಕೆಂದ್ರಗಳು ಇರಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ರಾಜ್ಯದಲ್ಲೂ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ್ದೇವೆ’ ಎಂದರು.

ಆರ್. ಆರ್. ಕಾಲೇಜು ಕಂಪ್ಯೂಟರ್ ವಿಭಾಗ ಅಭಿವೃದ್ಧಿಪಡಿಸಿರುವ ‘ಬ್ಲಡ್ ಡೋನರ್ಸ್’ ಆ್ಯಪ್ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ರಾಜಾರೆಡ್ಡಿ, ಕಾರ್ಯದರ್ಶಿ ಕಿರಣ್ , ಪ್ರಾಂಶುಪಾಲ ನಾರಾಯಣ ಸ್ವಾಮಿ, ಜಂಟಿ ಆಯುಕ್ತ ನರಸಿಂಹಮೂರ್ತಿ , ಲಯನ್ ಮನೋಜ್ , ಮೋಹನ್ ಕುಮಾರ್, ರವೀಂದ್ರ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.