ADVERTISEMENT

ಪೆನ್‌ಡ್ರೈವ್‌ ಹಂಚಿಕೆ ಆರೋಪ: ಪ್ರಜ್ವಲ್‌, ಪ್ರೀತಂಗೌಡ ವಿರುದ್ಧ ಎಫ್‌ಐಆರ್‌

ಲೈಂಗಿಕ ದೌರ್ಜನ್ಯ, ಪೆನ್‌ಡ್ರೈವ್‌ ಹಂಚಿಕೆ ಆರೋಪ: ಎಸ್‌ಐಟಿ ತನಿಖೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:43 IST
Last Updated 25 ಜೂನ್ 2024, 15:43 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೊ ಹಂಚಿಕೆ ಆರೋಪ ಸಂಬಂಧ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಶಾಸಕ, ಬಿಜೆಪಿಯ ಪ್ರೀತಂಗೌಡ ಸೇರಿ ನಾಲ್ವರ ವಿರುದ್ಧ ಸಿಐಡಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರಜ್ವಲ್‌ ಅವರು ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಮಾಡಿದ್ದಾರೆ. ಆ ವಿಡಿಯೊವನ್ನು ಪ್ರೀತಂಗೌಡ ಹಾಗೂ ಅವರ ಆಪ್ತರಾದ ಕಿರಣ್‌, ಶರತ್‌ ಎಂಬವರು ಹಂಚಿಕೆ ಮಾಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 354ಎ (ಲೈಂಗಿಕ ಕಿರುಕುಳ), 354ಡಿ (ಇಚ್ಛೆಗೆ ವಿರುದ್ಧವಾಗಿ ಸಂವಹನ ನಡೆಸುವ ಹಾಗೂ ಮಹಿಳೆ ಹಿಂಬಾಲಿಸುವ), 354ಬಿ (ಮಹಿಳೆ ಮೇಲೆ ಆಕ್ರಮಣ ಹಾಗೂ ವಿವಸ್ತ್ರಗೊಳಿಸುವಂತೆ ಒತ್ತಾಯ), 506 (ಬೆದರಿಕೆ), 66ಇ (ಐ.ಟಿ ಕಾಯ್ದೆಯ ಉಲ್ಲಂಘಿಸಿ ಚಿತ್ರೀಕರಣ) ಅಡಿ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ಹೇಳಿವೆ.

ADVERTISEMENT

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಏಪ್ರಿಲ್‌ 28ರಂದು ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಪ್ರಜ್ವಲ್ ಅವರು ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ ವಹಿಸಿ ತನಿಖೆಗೆ ಆದೇಶಿಸಿತ್ತು. ತನಿಖಾ ತಂಡ ಆರೋಪಿ ವಿರುದ್ಧ ಬ್ಲೂಕಾರ್ನರ್‌ ನೋಟಿಸ್‌ ಜಾರಿಗೊಳಿಸಿತ್ತು. ನ್ಯಾಯಾಲಯ ಸಹ ಬಂಧನದ ವಾರಂಟ್‌ ಹೊರಡಿಸಿತ್ತು. ವಿದೇಶದಿಂದ ನಗರಕ್ಕೆ ಬಂದ ಅವರನ್ನು ಎಸ್‌ಐಟಿ ಬಂಧಿಸಿತ್ತು.

‘ಮೇ 1ರಂದು ಸಿಐಡಿ ಠಾಣೆಯಲ್ಲಿ ಹಾಗೂ ಮೇ 8ರಂದು ಕೆ.ಆರ್‌.ನಗರ ಠಾಣೆಯಲ್ಲಿ ಸಂತ್ರಸ್ತೆಯ ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದವು. ಈಗ ಪ್ರಜ್ವಲ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರೀತಂಗೌಡಗೆ ನೋಟಿಸ್‌:‌

‘ನಾಲ್ಕನೇ ಪ್ರಕರಣದಲ್ಲಿ ಎಸ್‌ಐಟಿ ಪ್ರಜ್ವಲ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ಹಾಸನ ಸೇರಿ ವಿವಿಧ ಸ್ಥಳಕ್ಕೆ ಕರೆದೊಯ್ದು ಮತ್ತೆ ಮಹಜರು ನಡೆಸಲಾಗುವುದು. ಪ್ರೀತಂಗೌಡಗೆ ವಿಚಾರಣೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಸಿಐಡಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಮಾಹಿತಿ ಇಲ್ಲ. ಮಾಹಿತಿ ತಿಳಿದು ಪ್ರತಿಕ್ರಿಯಿಸುತ್ತೇನೆ’ ಎಂದು ಪ್ರೀತಂಗೌಡ ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

ಪ್ರೀತಂಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.