ಬೆಂಗಳೂರು: ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಹೊಂದಿರದ ಅಪಾರ್ಟ್ ಮೆಂಟ್‌ಗಳಿಗೆ ದುಪ್ಪಟ್ಟು ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.
‘ಘನತ್ಯಾಜ್ಯ ನಿರ್ವಹಣೆ ನಿಯಮದ ಪ್ರಕಾರ, 100 ಕೆ.ಜಿಗಿಂತಲೂ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ (ಬಲ್ಕ್ ಜನರೇಟರ್) ಅಪಾರ್ಟ್‌ಮೆಂಟ್‌ಗಳಲ್ಲಿ, ಅದರ ನಿರ್ವಹಣೆ ವ್ಯವಸ್ಥೆ ಇರಬೇಕು. ಆದರೆ, ‘ಯಾರಿಗೋ ತ್ಯಾಜ್ಯ ಕೊಡುತ್ತಿದ್ದೇವೆ’ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ಇವೆಲ್ಲವನ್ನೂ ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
‘ನಮ್ಮ ಸಿಬ್ಬಂದಿ ತಪಾಸಣೆ ಮಾಡಿದ ಸಂದರ್ಭದಲ್ಲಿ, ಹಲವು ಬಲ್ಕ್ ಜನರೇಟರ್‌ಗಳು ಎಂಎಸ್‌ಜಿಪಿ ಇನ್‌ಫ್ರಾಟೆಕ್ ಸಂಸ್ಥೆಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಎಂಎಸ್‌ಜಿಪಿಯ ಸಾಮರ್ಥ್ಯ 750 ಟನ್. ಬಿಬಿಎಂಪಿ ವತಿಯಿಂದಲೇ ನಿತ್ಯವೂ 500 ಟನ್ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇನ್ನುಳಿದ 250 ಟನ್ ಸಾಮರ್ಥ್ಯದಲ್ಲಿ ನಗರದ ಇಷ್ಟೊಂದು ಬಲ್ಕ್ ಜನರೇಟರ್‌ಗಳು ಹೇಗೆ ಅಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಅಷ್ಟೊಂದು ಟಿಪ್ಪರ್‌ಗಳು ಅಲ್ಲಿಗೆ ಹೋಗುತ್ತಿವೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಹೀಗಾಗಿ, ತಪಾಸಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಬಲ್ಕ್ ಜನರೇಟರ್‌ಗಳು ನಮ್ಮ ವ್ಯವಸ್ಥೆಗೆ ಬಾರದೆ ಅನೌಪಚಾರಿಕವಾಗಿ, ಘನತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ. ಕೆಲವರಿಗೆ ಹಣ ನೀಡುತ್ತಿದ್ದಾರೆ. ನಮ್ಮ ವಾಹನಗಳಲ್ಲೇ ಕಸ ಹಾಕುತ್ತಿದ್ದಾರೆ. ಅದು ಭೂಭರ್ತಿ ಪ್ರದೇಶಗಳಿಗೆ ಹೋಗುತ್ತಿದೆ’ ಎಂದರು.
‘ಅಪಾರ್ಟ್‌ಮೆಂಟ್‌ಗಳು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಹೊಂದ ಲೇಬೇಕು. ಯಾರು ಈ ವ್ಯವಸ್ಥೆಯನ್ನು ಹೊಂದಿಲ್ಲವೋ ಅವರಿಗೆ ಸಮಯ ನಿಗದಿ ಮಾಡಿ, ಅನುಷ್ಠಾನಕ್ಕೆ ಸೂಚಿಸಲಾಗುತ್ತದೆ. ಅಲ್ಲಿಯವರೆಗೆ ಅವರಿಂದ ದಂಡದ ರೂಪದಲ್ಲಿ ದುಪ್ಪಟ್ಟು ವೆಚ್ಚ ಪಡೆದುಕೊಂಡು ಬಿಬಿಎಂಪಿಯೇ ಕಸ ಸಂಗ್ರಹ ಮಾಡಲಿದೆ. ಘನತ್ಯಾಜ್ಯ ನಿರ್ವಹಣೆ ಕಂಪನಿಯಿಂದ ತ್ಯಾಜ್ಯ ವಿಲೇವಾರಿಗೆ ಎಷ್ಟು ಹಣ ನಿಗದಿಯಾಗಿದೆಯೋ ಅದಕ್ಕಿಂತ ಎರಡುಪಟ್ಟು ಹೆಚ್ಚು ಹಣ ಸಂಗ್ರಹಿಸಲಾಗುತ್ತದೆ’ ಎಂದರು.
ಖಾಸಗಿ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಅನುವು ಮಾಡಿಕೊಡಲು ಬಿಬಿಎಂಪಿ ನಿರ್ಧರಿಸಿದೆ. ಸಂಸ್ಥೆಗಳು ತಮ್ಮದೇ ಜಾಗ ಹಾಗೂ ಯಂತ್ರಗಳನ್ನು ಬಳಸಿಕೊಂಡು ಸಂಸ್ಕರಣೆ ಕಾರ್ಯ ಕೈಗೊಳ್ಳಬಹುದು. ಬಲ್ಕ್ ಜನರೇಟರ್‌ಗಳಿಂದ ತ್ಯಾಜ್ಯ ಪಡೆದುಕೊಳ್ಳಬಹುದು ಎಂದರು.
‘ರೈಲ್ವೆ ಇಲಾಖೆಯಿಂದ ತೊಂದರೆ’
‘ಓಕಳಿಪುರ ಮೇಲ್ಸೇತುವೆಯ ಪ್ರದೇಶದಲ್ಲಿ ರೈಲ್ವೆ ಇಲಾಖೆಯವರು ಕಾಮಗಾರಿ ಪೂರ್ಣಗೊಳಿಸುವವರೆಗೂ ಅಲ್ಲಿ ನೀರು ನಿಲ್ಲುವ ಸಮಸ್ಯೆ ಉಂಟಾಗುತ್ತದೆ. ಕಾಮಗಾರಿ ನಡೆಸಲು ₹40 ಕೋಟಿಯನ್ನು ಪಾವತಿಸಿದ್ದೇವೆ. ವೆಚ್ಚ ಹೆಚ್ಚಾಗಿದೆ ಎಂದು ಇನ್ನಷ್ಟು ಹಣ ಕೇಳುತ್ತಿದ್ದಾರೆ. ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಮನವೊಲಿಸಲಾಗುತ್ತದೆ’ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ದಕ್ಷಿಣದಲ್ಲಿ ದೂರು ಸ್ವೀಕಾರ ಇಂದು
ಜಯನಗರದಲ್ಲಿರುವ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರ ಕಚೇರಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮ ಮಂಗಳವಾರ ನಡೆಯಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮುಖ್ಯ ಆಯುಕ್ತ ತುಷಾರ್ ಗಿರನಾಥ್ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.