ADVERTISEMENT

ಜನರ ತಲೆಯಲ್ಲಿ ಚರಿತ್ರೆಗಿಂತ ‍ಪುರಾಣವೇ ತುಂಬಿದೆ: ಮಾವಳ್ಳಿ ಶಂಕರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:41 IST
Last Updated 7 ಜುಲೈ 2024, 15:41 IST
ಮಾವಳ್ಳಿ ಶಂಕರ್‌
ಮಾವಳ್ಳಿ ಶಂಕರ್‌   

ಬೆಂಗಳೂರು: ದೇಶದಲ್ಲಿ ಸಾಮಾನ್ಯ ಜನರ ಚರಿತ್ರೆಯನ್ನು ಮರೆಮಾಚಲಾಗಿದೆ. ಜನರ ತಲೆಗೆ ಪುರಾಣವನ್ನೇ ತುಂಬಲಾಗಿದೆ. ತಳಸಮುದಾಯಗಳ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನು ವಿದ್ಯಾವಂತರು ಮಾಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಬುದ್ಧಪ್ರಿಯ ಗಂಗಾಧರ್‌ ಮಾವಳ್ಳಿ ಅವರ ‘ಜಲ ಸ್ವಾತಂತ್ರ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಉಪನ್ಯಾಸ ನೀಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಾದ ಮೇಲೆ ಪಡೆದ ಹಕ್ಕುಗಳಿಂದ ತಳಸಮುದಾಯಗಳು ಸ್ವಾಭಿಮಾನದಿಂದ ಬದುಕುವಂತಾಗಿದೆ. ವಿದ್ಯೆ ಪಡೆದು ಉತ್ತಮ ಸ್ಥಾನಗಳಿಗೆ ಈ ಸಮುದಾಯದವರು ಹೋಗಿದ್ದಾರೆ. ಆದರೆ, ಹಿಂದೆ ತಳಸಮುದಾಯಗಳು ಯಾವ ಸ್ಥಿತಿಯಲ್ಲಿದ್ದವು? ಈ ಸ್ಥಾನಮಾನ ಪಡೆಯಲು ಕಾರಣವೇನು? ಎಂಬ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪೌರ ಕಾರ್ಮಿಕರ ಮಗನಾಗಿರುವ ಬುದ್ಧಪ್ರಿಯ ಗಂಗಾಧರ್‌ ಸಮಾಜವನ್ನು ಹಿಂತಿರುಗಿ ನೋಡುವ ಕೆಲಸವನ್ನು ಮಾಡುತ್ತಿದ್ದಾರೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಮಹಾಡ್‌ ಕೆರೆ ನೀರನ್ನು ಮುಟ್ಟುವ ಮೂಲಕ ಸ್ವಾಭಿಮಾನಿ ಚಳವಳಿಯನ್ನು ಹೇಗೆ ಕಟ್ಟಿದರು ಎಂಬುದನ್ನು ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ತಹಶೀಲ್ದಾರ್‌ ರಾಜಶೇಖರ ಮೂರ್ತಿ ಮಾತನಾಡಿ, ‘ಸಂವಿಧಾನದ ಆಶಯದಂತೆ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಸರ್ಕಾರ ಒಂದು ಕಡೆ ಮಾಡಬೇಕಾಗುತ್ತದೆ. ಅಷ್ಟಕ್ಕೆ ಸೀಮಿತವಾಗದೇ ಸಮುದಾಯವೂ ಕೈಜೋಡಿಸಬೇಕು. ತಳ ಸಮುದಾಯಗಳಿಂದ ಬಂದ ನೌಕರರು ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಬಿಬಿಎಂಪಿ ಜಂಟಿ ಆಯುಕ್ತೆ ಲಕ್ಷ್ಮೀದೇವಿ ಆರ್‌., ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್‌, ಡಿಸಿಆರ್‌ಇ ಡಿವೈಎಸ್‌ಪಿ ಮಹಾನಂದ್‌, ಸ್ಯಾಮ್‌ ಪಬ್ಲಿಕೇಷನ್‌ ಮುಖ್ಯಸ್ಥ ಸಿದ್ಧಾರ್ಥ ಆನಂದ್‌ ಮಾಲೂರು, ಕೃತಿಕಾರ ಬುದ್ಧಪ್ರಿಯ ಗಂಗಾಧರ್‌ ಮಾವಳ್ಳಿ, ಅನುವಾದಕ ಅಬ್ದುಲ್ ರೆಹಮಾನ್‌ ಪಾಷಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.