ADVERTISEMENT

ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಸ್ತೆಯಲ್ಲಿ ಕಸ, ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಠಿಣ ಕ್ರಮವಾಗಲಿ: ಸರ್ಕಾರಕ್ಕೆ ವಿದ್ಯಾರ್ಥಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:44 IST
Last Updated 2 ಅಕ್ಟೋಬರ್ 2024, 15:44 IST
‘ಸ್ವಚ್ಛತಾ ಆಂದೋಲನಾ ಪ್ರತಿಜ್ಞಾ ವಿಧಿ’ ಸ್ವೀಕರಿಸಿದ ವಿದ್ಯಾರ್ಥಿಗಳು
‘ಸ್ವಚ್ಛತಾ ಆಂದೋಲನಾ ಪ್ರತಿಜ್ಞಾ ವಿಧಿ’ ಸ್ವೀಕರಿಸಿದ ವಿದ್ಯಾರ್ಥಿಗಳು   

ಬೆಂಗಳೂರು: ‘ಸ್ವಚ್ಛತೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ನಾಗರಿಕರು ರಸ್ತೆಯಲ್ಲೇ ತ್ಯಾಜ್ಯ ಬಿಸಾಡುತ್ತಾರೆ. ರಸ್ತೆಯಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಏನಾದರೂ ಕ್ರಮ ಕೈಗೊಂಡಿದ್ದೀರಾ? ಪ್ಲಾಸ್ಟಿಕ್ ಬಳಕೆ‌ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ? ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಿದರೂ ಜನ ಏಕೆ ಎಚ್ಚೆತ್ತುಕೊಂಡಿಲ್ಲ? ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ತೆಗೆದುಕೊಂಡಿರುವ ಕ್ರಮಗಳೇನು?...’

ಮಹಾತ್ಮ ಗಾಂಧಿಯವರ 155ನೇ ಜನ್ಮದಿನಾಚರಣೆ ಅಂಗವಾಗಿ ಬಿಬಿಎಂಪಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸ್ವಚ್ಛತಾ ಆಂದೋಲನಾ ಪ್ರತಿಜ್ಞಾ ವಿಧಿ’ ಸ್ವೀಕರಿಸಿದ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಕೇಳಿದ ಪ್ರಶ್ನೆಗಳಿವು.

‘ರಸ್ತೆಯಲ್ಲಿ ಕಸ ನಿರ್ಮೂಲನೆ, ಪ್ಲಾಸ್ಟಿಕ್‌ ನಿಷೇಧಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಮಾಡಿರುವ ಅಪರಾಧವನ್ನು ಮತ್ತೆ ಮಾಡಬಾರದು ಎಂದು ದಂಡವನ್ನೂ ವಿಧಿಸಲಾಗುತ್ತಿದೆ. ಆದರೆ, ಇನ್ನೂ ಅಂತಹ ಸಮಸ್ಯೆ ಇದೆ. ಕಸ, ಪ್ಲಾಸ್ಟಿಕ್‌ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿ, ಪೋಷಕರು ಹಾಗೂ ತಮ್ಮ ನೆರೆಹೊರೆಯವರಲ್ಲಿ ಅರಿವು ಮೂಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ADVERTISEMENT

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಜರಿದ್ದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಾಸಕರು, ಅಧಿಕಾರಿಗಳು ಹಾಗೂ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದ ಸರ್ಕಾರಿ, ಅನುದಾನಿತ ಹಾಗು ಖಾಸಗಿ ಶಾಲಾ-ಕಾಲೇಜುಗಳ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ‘ಸ್ವಚ್ಛತೆ ಪ್ರತಿಜ್ಞಾ ವಿಧಿ’ ಬೋಧಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ, ಎಚ್.ಕೆ.ಪಾಟೀಲ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ವಿಧಾನ‌ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್‌. ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಉಪಸ್ಥಿತರಿದ್ದರು.

ನಗರದ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೆ ನಡೆದ ‘ಗಾಂಧಿ ನಡಿಗೆ’ಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಆರು ಸಾವಿರ ರಸ್ತೆ ಗುಂಡಿ ಬಾಕಿ: ಡಿಸಿಎಂ

‘ನಗರದಲ್ಲಿ ಎರಡೂವರೆ ಸಾವಿರ ರಸ್ತೆ ಗುಂಡಿಗಳನ್ನು ಹಿಂದೆ ಗುರುತಿಸಲಾಗಿತ್ತು. 14 ಸಾವಿರ ಗುಂಡಿಗಳನ್ನು ಕಳೆದ ತಿಂಗಳು ಮುಚ್ಚಲಾಗಿದೆ. ಇನ್ನೂ ಆರು ಸಾವಿರ ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಗಾಂಧೀಜಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಟ್ಟವರು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು ಮತ್ತು ಪೌರಕಾರ್ಮಿಕರಿಗೆ ಗೌರವ ನೀಡಬೇಕು ಎಂದು ಅರಿವು ಮೂಡಿಸಬೇಕು. ಈ ಉದ್ದೇಶದಿಂದ ನಗರದಲ್ಲಿ ಒಂದು ಕಿ.ಮೀ ‘ಗಾಂಧಿ ನಡಿಗೆ’ ಹಮ್ಮಿಕೊಳ್ಳಲಾಗಿತ್ತು’ ಎಂದರು.

‘ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದಕ್ಕಾಗಿ ಬಿಬಿಎಂಪಿಯ ಕಾರ್ಯಕ್ರಮಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಾರ್ಯಕ್ರಮ ನಿರೂಪಣೆಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಅದೇ ರೀತಿ ಈ ಬಾರಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಮಕ್ಕಳು ನಿರೂಪಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಬಹುಮಾನ ವಿತರಣೆ

ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತೆ ಮತ್ತು ಹಸಿರೀಕರಣದ ವಿಷಯದಲ್ಲಿ ಬಿಬಿಎಂಪಿ ಆಯೋಜಿಸಿದ್ದ ಆನ್‌ಲೈನ್‌ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಹುಮಾನ ವಿತರಿಸಿದರು.

ಭಾಷಣ ಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನ ಪಡೆದವರ ವಿವರ ಹೀಗಿದೆ. ಪ್ರಾಥಮಿಕ ಶಾಲಾ ವಿಭಾಗ– ಕನ್ನಡ: ಸಾತ್ವಿಕ್ ಹೆಗಡೆ ಅರವಿಂದ್ ಶಾಲೆ; ಮನೋಜ್ ವೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಸಂತಪುರ; ಶ್ರೀವತ್ಸ ಪಾಲಿಕೆಯ ಪ್ರಾಥಮಿಕ ಶಾಲೆ ದಿಣ್ಣೂರು. ಪ್ರಾಥಮಿಕ ಶಾಲಾ ವಿಭಾಗ– ಇಂಗ್ಲಿಷ್‌: ಮರಿಯಾ ಬಿ ಕ್ರೈಸ್ಟ್ ಸ್ಕೂಲ್; ವೃಶಾಂಕ್ ಶೆಣೈ ಅರವಿಂದ್ ಮೆಮೊರಿಯಲ್ ಶಾಲೆ; ಎಸ್. ಪ್ರಣವ್‌ನಾಥ್ ಅಸಂಷನ್ ಸ್ಕೂಲ್ ರಾಜಾಜಿನಗರ. ಪ್ರೌಢ ಶಾಲಾ ವಿಭಾಗ– ಕನ್ನಡ: ಕುಸುಮಾ ಸೇಂಟ್ ಲಾರೆನ್ಸ್ ಶಾಲೆ; ದಕ್ಷತಾ ನ್ಯೂ ಪಬ್ಲಿಕ್ ಇಂಗ್ಲಿಷ್‌ ಶಾಲೆ ಚೈತನ್ಯಾ ಮೌಂಟ್ ಎವರೆಸ್ಟ್ ಇಂಗ್ಲಿಷ್‌ ಸ್ಕೂಲ್. ಪ್ರೌಢ ಶಾಲಾ ವಿಭಾಗ– ಇಂಗ್ಲಿಷ್‌: ಜಾನವಿ ಸಮಂತ ಶ್ರೀ ಶಾರದಾ ವಿದ್ಯಾನಿಕೇತನ್; ಲಕ್ಷ್ಮಿಕಾಂತ್ ಅಡಿಗ ಆರ್‌ಎಂಎಸ್ ಇಂಟರ್‌ನ್ಯಾಷನಲ್ ಶಾಲೆ; ಆಶ್ಲೇ ಜೇನ್ ಜ್ಞಾನಬೋಧಿನಿ ಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.