ADVERTISEMENT

ಕೋವಿಡ್: ಪ್ಲಾಸ್ಮಾ ಥೆರಪಿಗೆ ಅಪಸ್ವರ, ದಾನಿಗಳಿಂದ ಹಿಂದೇಟು

ಪ್ರತಿನಿತ್ಯ 50ರಿಂದ 70 ಮಂದಿಯಿಂದ ಪ್ಲಾಸ್ಮಾಕ್ಕೆ ಬೇಡಿಕೆ

ವರುಣ ಹೆಗಡೆ
Published 11 ಮೇ 2021, 21:35 IST
Last Updated 11 ಮೇ 2021, 21:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಕಾಯಿಲೆಗೆ ಗಂಭೀರವಾಗಿ ಅಸ್ವಸ್ಥಗೊಂಡು, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಏರಿಕೆ ಕಂಡಿದೆ. ಇದರಿಂದಾಗಿ ಪ್ಲಾಸ್ಮಾ ಥೆರಪಿ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಚಿಕಿತ್ಸಾ ವಿಧಾನದ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿಯೇ ಈಗ ಅಪಸ್ವರ ವ್ಯಕ್ತವಾಗಿದೆ.

ರಾಜ್ಯ ಸರ್ಕಾರವು ಕಳೆದ ವರ್ಷ ಡ್ರಗ್‌ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ (ಡಿಸಿಜಿಐ) ಅನುಮತಿ ಪಡೆದು, ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಿತ್ತು. ಬಳಿಕ ಎಚ್‌ಸಿಜಿ, ಮಣಿಪಾಲ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೂಡ ಪ್ಲಾಸ್ಮಾ ಬ್ಯಾಂಕ್‌ಗಳನ್ನು ಪ್ರಾರಂಭಿಸಿದ್ದವು. ಗಂಭೀರವಾಗಿ ಅಸ್ವಸ್ಥರಾಗಿ, ತೀವ್ರ ನಿಗಾ ಘಟಕ ದಲ್ಲಿರುವವರಿಗೆ (ಐಸಿಯು) ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಈ ಥೆರಪಿ ಮಾಡಲಾಗಿತ್ತು. ಪ್ಲಾಸ್ಮಾ ದಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಾನಿಗಳಿಗೆ ಪೌಷ್ಟಿಕಾಂಶದ ಭತ್ಯೆಯಾಗಿ ತಲಾ ₹ 5 ಸಾವಿರ ಘೋಷಿಸಿತ್ತು.

ಕಳೆದ ವರ್ಷಾಂತ್ಯಕ್ಕೆ ಕೋವಿಡ್‌ ಪ್ರಕರಣ ಹಾಗೂ ಮರಣ ಪ್ರಮಾಣ ಇಳಿಕೆ ಕಂಡ ಬಳಿಕ ಪ್ಲಾಸ್ಮಾ ಸಂಗ್ರಹವನ್ನು ವಿಕ್ಟೋರಿಯಾ ಸೇರಿದಂತೆ ಕೆಲ ಆಸ್ಪತ್ರೆಗಳು ಸ್ಥಗಿತ ಮಾಡಿದ್ದವು. ‘ಕೋವಿಡ್ ಪ್ರಕರಣಗಳಲ್ಲಿ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಪ್ಲಾಸ್ಮಾ ಥೆರಪಿ ಅಷ್ಟೊಂದು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಅಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸ್ಪಷ್ಟಪಡಿಸಿತ್ತು. ಹೀಗಾಗಿ, ಕೆಲವೆಡೆ ಪ್ಲಾಸ್ಮಾ ಥೆರಪಿಯನ್ನು ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ವೈದ್ಯಕೀಯ ವಲಯದಲ್ಲಿ ಕೂಡ ಇದರ ಫಲಿತಾಂಶದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ADVERTISEMENT

ಹೆಚ್ಚಿನ ಬೇಡಿಕೆ: ಈಗ ಕೋವಿಡ್ ಪ್ರಕರಣಗಳ ದಿಢೀರ್ ಏರಿಕೆ ಕಾಣುವ ಜತೆಗೆ ಮರಣ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಅದೇ ರೀತಿ, 2,500ಕ್ಕೂ ಅಧಿಕ ಮಂದಿ ಐಸಿಯು ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದರಿಂದಾಗಿ ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ಲಾಸ್ಮಾ ಥೆರಪಿಗೆ ಶಿಫಾರಸು ಮಾಡಲಾರಂಭಿಸಿದ್ದಾರೆ. ಪ್ಲಾಸ್ಮಾ ಬ್ಯಾಂಕ್‌ಗಳಲ್ಲಿ ಪ್ರತಿನಿತ್ಯ 50ರಿಂದ 70 ಮಂದಿ ಪ್ಲಾಸ್ಮಾಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಕೋವಿಡ್‌ನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನಕ್ಕೆ ಹಿಂದೇಟು ಹಾಕುತ್ತಿರುವ ಪರಿಣಾಮ 5ರಿಂದ 10 ಮಂದಿಗೆ ದೊರೆಯುತ್ತಿದೆ.

‘ರಕ್ತದಲ್ಲಿ ಸಮಾನವಾಗಿ ಕೋಶ ಮತ್ತು ರಸಗಳು (ಪ್ಲಾಸ್ಮಾ) ಇರುತ್ತವೆ. ರೋಗದಿಂದ ಗುಣಮುಖರಾದವರ ದುಗ್ಧ ರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಪ್ರತಿರೋಧ ಕಣಗಳು ಕೊರೊನಾ ವೈರಾಣುವಿನ ಮೇಲೆ ದಾಳಿ ನಡೆಸುವ ಗುಣಗಳನ್ನು ಬೆಳೆಸಿಕೊಂಡಿರುತ್ತದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಲ್ಲಿ ಪ್ಲಾಸ್ಮಾ ಥೆರಪಿಯ ಮೂಲಕ ಸಾವಿನ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಶ್ರಮಿಸಬಹುದು’ ಎಂದು ಕ್ಯಾನ್ಸರ್ ತಜ್ಞ ಹಾಗೂ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ತಿಳಿಸಿದರು.

ಚೇತರಿಸಿಕೊಂಡ 3 ತಿಂಗಳ ಅವಧಿ ಉತ್ತಮ
‘ರೋಗಿಗೆ ವೈದ್ಯಕೀಯ ಆಮ್ಲಜನಕ ಬೇಕಾಕುವ ಮೂರು ದಿನಗಳ ಮೊದಲು ಪ್ಲಾಸ್ಮಾ ನೀಡಿದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಅದರಲ್ಲಿ ಅಧಿಕ ಪ್ರಮಾಣದಲ್ಲಿ ಪ್ರತಿರೋಧ ಕಣಗಳು ಇರಬೇಕು. ಇಲ್ಲವಾದಲ್ಲಿ ಫಲಿತಾಂಶ ಸಿಗುವುದಿಲ್ಲ. ಮೊದಲನೆ ಅಲೆಯಲ್ಲಿ ನಮ್ಮಿಂದ ಪ್ಲಾಸ್ಮಾ ಪಡೆದವರಲ್ಲಿ ಶೇ 60 ರಷ್ಟು ಮಂದಿಗೆ ಸಹಕಾರಿಯಾಗಿದೆ. 18 ವರ್ಷ ಮೇಲ್ಪಟ್ಟವರು ಪ್ಲಾಸ್ಮಾ ದಾನ ಮಾಡಬಹುದು. ಕೋವಿಡ್‌ನಿಂದ ಚೇತರಿಸಿಕೊಂಡ ಒಂದು ತಿಂಗಳಿನಿಂದ 3 ತಿಂಗಳ ಅವಧಿಯಲ್ಲಿ ಪ್ರತಿರೋಧ ಕಣಗಳು ಇರುವವರೆಗೆ ಎರಡು ವಾರಗಳಿಗೆ ಒಮ್ಮೆ ಪ್ಲಾಸ್ಮಾ ದಾನಮಾಡಬಹುದು’ ಎಂದು ಡಾ. ವಿಶಾಲ್ ರಾವ್ ತಿಳಿಸಿದರು.

ಪ್ಲಾಸ್ಮಾ ಥೆರಪಿ ನಿರರ್ಥಕ: ಡಾ. ಶಿವಕುಮಾರ್
‘ಪ್ಲಾಸ್ಮಾ ಥೆರಪಿಯಿಂದ ಉತ್ತಮ ಫಲಿತಾಂಶ ದೊರೆತಿಲ್ಲ. ರೋಗಿಯು ಚೇತರಿಸಿಕೊಂಡಲ್ಲಿ ಅಥವಾ ಸ್ಪಂದಿಸಿದಲ್ಲಿ ಪ್ಲಾಸ್ಮಾನು ನೀಡಬಹುದಾಗಿತ್ತು. ಆದರೆ, ಇದರಿಂದ ಮರಣ ಪ್ರಮಾಣ ದರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಕೆಲವೊಂದು ಔಷಧ ಮತ್ತು ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತದೆ. ಅದರಿಂದ ಉತ್ತಮ ಫಲಿತಾಂಶ ದೊರೆತಲ್ಲಿ ಮುಂದುವರೆಸಲಾಗುತ್ತದೆ. ಕೆಲ ಖಾಸಗಿ ಆಸ್ಪತ್ರೆಗಳು ಮಾತ್ರ ಈ ಚಿಕಿತ್ಸೆಯನ್ನು ನೀಡುತ್ತಿವೆ. ಪ್ಲಾಸ್ಮಾವನ್ನು ವಾಣಿಜ್ಯ ದೃಷ್ಟಿಕೋನದಿಂದ ಕೆಲವರು ನೋಡುತ್ತಿದ್ದಾರೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.

‘ಪ್ಲಾಸ್ಮಾ ಥೆರಪಿಯನ್ನು ಕೆಲವೆಡೆ ಈಗಲೂ ಮಾಡುತ್ತಿದ್ದಾರೆ. ಅದು ಉತ್ತಮ ಫಲಿತಾಂಶವನ್ನು ನೀಡಲಿಲ್ಲ. ಅದು ಅಷ್ಟು ಪ್ರಯೋಜನಕಾರಿಯಲ್ಲ ಎಂದುಐಸಿಎಂಆರ್‌ ಕೂಡ ಹೇಳಿದೆ. ರೋಗಿಯ ಸ್ಥಿತಿಗತಿ ಹಾಗೂ ದಾನಿಯ ಪ್ಲಾಸ್ಮಾದಲ್ಲಿನ ಪ್ರತಿರೋಧ ಕಣಗಳನ್ನು ಆಧರಿಸಿ ಫಲಿತಾಂಶ ದೊರೆಯುತ್ತದೆ’ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್‌ ಪಾಟೀಲ್ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ., ‘ಪ್ಲಾಸ್ಮಾ ಥೆರಪಿಯಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ, ಇದಕ್ಕೆ ಮಹತ್ವ ನೀಡುತ್ತಿಲ್ಲ. ಕೆಲ ವೈದ್ಯರು ಮಾತ್ರ ಪ್ಲಾಸ್ಮಾ ತರಲು ಸೂಚಿಸುತ್ತಿದ್ದಾರೆ. ಈ ಚಿಕಿತ್ಸೆಯಿಂದ ಮರಣ ಪ್ರಮಾಣ ದರ ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.