ADVERTISEMENT

'ಅನಧಿಕೃತ' ತೆರವು ಪ್ರಕರಣ: ಸೂರಿಗಾಗಿ ಕಾರ್ಮಿಕರ ಅಲೆದಾಟ

ಬಿಬಿಎಂಪಿ ಅಧಿಕಾರಿ– ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 10:39 IST
Last Updated 23 ಜನವರಿ 2020, 10:39 IST
ತೆರವುಗೊಳಿಸಿದ ಜೋಪಡಿಗಳ ಅವಶೇಷಗಳ ಎದುರು ಆಟವಾಡುತ್ತ ಸಾಗಿದ ಬಾಲಕ (ಎಡಚಿತ್ರ) ಜೋಪಡಿಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದಾಗಿ ಸ್ಥಳೀಯ ಕಾರ್ಮಿಕರೊಬ್ಬರು ನೀರಿನ ಕ್ಯಾನ್‌ಗಳನ್ನು ಇಟ್ಟುಕೊಂಡು ಜೋಪಡಿಗಳಿಗೆ ತಲುಪಿಸಿದರು – ಪ್ರಜಾವಾಣಿ ಚಿತ್ರಗಳು/ಇರ್ಷಾದ್‌ ಮಹಮ್ಮದ್‌

ಬೆಂಗಳೂರು: ಅನಧಿಕೃತವಾಗಿ ಜೋಪಡಿ ನೆಲಸಮ ಮಾಡಿರುವುದರಿಂದ ಸೂರು ಕಳೆದುಕೊಂಡು ಬೀದಿಗೆ ಬಂದಿರುವ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ನೂರಾರು ಕಾರ್ಮಿಕರ ಕುಟುಂಬಗಳು ಹೊಸ ಸೂರಿಗಾಗಿ ಅಲೆದಾಡುತ್ತಿದ್ದಾರೆ.

ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಮಂತ್ರಿ ಇಸ್ಪನ್ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಖುಲ್ಲಾ ಜಾಗದಲ್ಲಿ ಮಾಲೀಕರ ಜೊತೆ ‘ಬಾಡಿಗೆ ಕರಾರು ಪತ್ರ’ ಮಾಡಿಕೊಂಡು ವಾಸವಿದ್ದ ಕಾರ್ಮಿಕರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈಗ ಜೋಪಡಿಯೇ ನೆಲಸಮವಾಗಿದ್ದು, ಮುಂದೇನು? ಎಂಬ ಚಿಂತೆ ಕಾರ್ಮಿಕರನ್ನು ಕಾಡುತ್ತಿದೆ.

‘₹ 3 ಸಾವಿರ ಕೊಟ್ಟು ಆರು ಮಂದಿ ಜೋಪಡಿಯಲ್ಲಿ ಇದ್ದೆವು. ಜೋಪಡಿ ಹೋಯಿತೆಂದು ಊರಿಗೆ ವಾಪಸು ಹೋದರೆ, ಮಾಡಲು ಏನು ಕೆಲಸವಿಲ್ಲ. ಎಷ್ಟೇ ಕಷ್ಟವಾದರೂ ಇಲ್ಲಿಯೇ ಇದ್ದು, ದುಡಿದ ಹಣದಲ್ಲೇ ಸ್ವಲ್ಪ ಉಳಿಸಿ ಊರಿಗೆ ಕಳುಹಿಸಬೇಕು’ ಎಂದು ಕಾರ್ಮಿಕ ಗಂಗಾವತಿಯ ಮರಿಯಪ್ಪ ಹೇಳಿದರು.

ADVERTISEMENT

‘ತಿಂಗಳಿಗೆ ₹ 10 ಸಾವಿರದಿಂದ ₹ 15 ಸಾವಿರ ದುಡಿಯಬಹುದು. ಬೆಳ್ಳಂದೂರು, ಮಾರತ್ತಹಳ್ಳಿ, ದೇವರಬಿಸನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಒಂದು ಕೊಠಡಿಗೆ ₹ 6 ಸಾವಿರದಿಂದ ₹ 12 ಸಾವಿರ ಬಾಡಿಗೆ ಇದೆ. ಅಷ್ಟು ಬಾಡಿಗೆ ಕೊಟ್ಟು, ಉಳಿದ ಹಣದಲ್ಲಿ ಹೇಗೆ ತಾನೇ ಜೀವನ ನಡೆಸುವುದು’ ಎಂದು ಅವರು ಪ್ರಶ್ನಿಸಿದರು.

ಬೆಳೆ ಹೋಗಿತ್ತು, ಈಗ ಜೋಪಡಿಯೂ ಹೋಯ್ತು: ಕೊಪ್ಪಳದ ಸೋಮನಾಥ್, ‘ನಮ್ಮ ಪರಿಸ್ಥಿತಿಯೇ ಕೆಟ್ಟಿದೆ. ಊರಲ್ಲಿ ನೀರು ಇಲ್ಲದೆ ಬೆಳೆ ಹೋಗಿತ್ತು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಹೇಗೋ ನೆಲೆ ಕಂಡುಕೊಂಡಿದ್ದೆ. ಇದೀಗ ವಾಸವಿದ್ದ ಜೋಪಡಿಯೂ ಹೋಯ್ತು’ ಎಂದು ಕಣ್ಣೀರಿಟ್ಟರು.

‘ಏಕಾಏಕಿ ಜೋಪಡಿ ಬಳಿ ಬಂದಿದ್ದ ಯಾರೋ ಅಧಿಕಾರಿ ಹಾಗೂ ಪೊಲೀಸರು, ‘ಜೋಪಡಿಯಲ್ಲಿ ಬಾಂಗ್ಲಾದವರು ಇದ್ದಾರೆ. ಜಾಗ ಖಾಲಿ ಮಾಡಿ’ ಎಂದರು. ದಾಖಲೆ ತೋರಿಸಿದರೂ ನೋಡಲಿಲ್ಲ. ದಿನದ ದುಡಿಮೆ ನಂಬಿ ಬದುಕುವ ನಮ್ಮಂಥ ಬಡವರಿಗೆ ಏಕೆ ಈ ಶಿಕ್ಷೆ’ ಎಂದು ಅಳಲು ತೋಡಿಕೊಂಡರು.

ನಾವೆಲ್ಲ ರೈತರು: ಹೆಸರು ಹೇಳಲಿಚ್ಛಿಸದ ಕೊಪ್ಪಳದ ನಿವಾಸಿಯೊಬ್ಬರು, ‘ನಾವೆಲ್ಲ ರೈತರು. ನಮಗೂ ಜಮೀನು ಇದೆ. ಆದರೆ, ನೀರಿಲ್ಲ. ಬೆಂಗಳೂರಿನಲ್ಲಿ ಕೆಲಸ ಸಿಗುತ್ತದೆಂದು ಇಲ್ಲಿಗೆ ಬಂದಿದ್ದೇವೆ. ಈಗ ಬೀದಿಯಲ್ಲಿ ನಿಂತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ತಲೆ ಒಡೆದಿಲ್ಲ, ಕಳವು ಮಾಡಿಲ್ಲ. ಕಷ್ಟಪಟ್ಟು ದುಡಿದು ಬದುಕುತ್ತಿದ್ದೇವೆ. ಅಧಿಕಾರಿಗಳು ಹಾಗೂ ಪೊಲೀಸರು ನಮ್ಮ ಮೇಲೇಕೆ ದರ್ಪ ಮೆರೆಯುತ್ತಾರೆ. ನಾವೆಲ್ಲರೂ ಜೋಪಡಿಯಲ್ಲಿ ವಾಸವಿದ್ದಿದ್ದೇತಪ್ಪಾ’ ಎಂದು ಪ್ರಶ್ನಿಸಿದರು.

ಯಾರದ್ದೋ ಜಾಗ;ಯಾರಿಗೋ ಬಾಡಿಗೆ:ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಮಂತ್ರಿ ಇಸ್ಪನ್ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಖುಲ್ಲಾ ಜಾಗ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಆ ಜಾಗ ತಮ್ಮದೇ ಎಂದು ಹೇಳಿಕೊಂಡು ಬಾಡಿಗೆ ನೀಡುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಖುಲ್ಲಾ ಜಾಗದಲ್ಲಿ ತಗಡು ಬಳಸಿ 300ಕ್ಕೂ ಹೆಚ್ಚು ಜೋಪಡಿಗಳನ್ನು ನಿರ್ಮಿಸಲಾಗಿದೆ. ಈ ಜಾಗದಲ್ಲಿ ಸಮರ್ಪಕ ರಸ್ತೆ, ಶೌಚಾಲಯ ಸೇರಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಇಂಥ ಜೋಪಡಿಗಳಲ್ಲೇ ಅಲ್ಲಿಯೇ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರು ಉಳಿದುಕೊಂಡಿದ್ದರು.

ಕೆಲ ಜೋಪಡಿ ಬಳಿ, ‘ಬಾಡಿಗೆಗೆ ಸಂಪರ್ಕಿಸಿ‍’ ಎಂಬ ಬೋರ್ಡ್‌ಗಳನ್ನೂ ನೇತು ಹಾಕಲಾಗಿದೆ. ಅದರಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಬಾಡಿಗೆ ವ್ಯವಹಾರ ಶುರುವಾಗುತ್ತದೆ.

‘ಜಾಗ ಖುಲ್ಲಾ ಇದೆ. ಕೆಲ ಭಾಗದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯವೂ ಇದೆ. ನೈಜ ಮಾಲೀಕರು ಯಾರು ಎಂಬುದಕ್ಕೆ ದಾಖಲೆಗಳು ಇಲ್ಲ. ನಾವೂ ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಾಂಗ್ಲಾದೇಶದವರು ಕೆಲ ಜೋಪಡಿಗಳನ್ನು ಆಶ್ರಯ ಪಡೆದಿದ್ದರು. ಆ ಬಗ್ಗೆ ನಿಖರ ಮಾಹಿತಿ ಪಡೆದು ಪರಿಶೀಲಿಸಲಾಗಿತ್ತು. ಮರುದಿನವೇ ಅವರೆಲ್ಲ ಓಡಿಹೋದರು. ಬಿಬಿಎಂಪಿಯವರು ತೆರವು ಮಾಡಲು ಮುಂದಾಗಿ ರಕ್ಷಣೆ ಕೋರಿದ್ದರು’ ಎಂದು ತಿಳಿಸಿದರು.

ಕಾರ್ಮಿಕರೊಬ್ಬರು, ‘ಮಾಲೀಕ ಹಾಗೂ ಅವರ ಕಡೆಯವರೆಂದು ಹೇಳಿಕೊಂಡು ಬರುವ ವ್ಯಕ್ತಿಯೇ ಕರಾರು ಪತ್ರ ಮಾಡಿಸಿ ಜೋಪಡಿ ಕೀ ಕೊಟ್ಟು ಹೋಗುತ್ತಾರೆ. ಪ್ರತಿ ತಿಂಗಳು ಬಂದು ₹ 3 ಸಾವಿರ ಬಾಡಿಗೆ ಪಡೆಯುತ್ತಾರೆ. ಇಲ್ಲಿರುವ ಎಲ್ಲ ಜೋಪಡಿಗಳನ್ನು ಸೇರಿಸಿದರೆ ಸುಮಾರು ₹9 ಲಕ್ಷ ಬಾಡಿಗೆ ಸಂಗ್ರಹವಾಗುತ್ತದೆ’ ಎಂದರು.

ಜೋಪಡಿ ತೆರವು: ಎಇಇ ಮಾತೃ ಇಲಾಖೆಗೆ ವಾಪಸ್‌:ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸದೆಯೇಜೋಪಡಿ ತೆರವುಗೊಳಿಸಲು ಕ್ರಮ ಕೈಗೊಂಡ ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿ.ಎಂ.ನಾರಾಯಣಸ್ವಾಮಿ ಅವರನ್ನು ಬಿಬಿಎಂಪಿ ಕರ್ತವ್ಯದಿಂದ ಬಿಡುಗಡೆ ಮಾಡಿ, ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ವಾಪಸ್‌ ಕಳುಹಿಸಿದೆ.

ನಾರಾಯಣ ಸ್ವಾಮಿ ಅವರು ಪಾಲಿಕೆಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ‘ಬೆಳ್ಳಂದೂರು ವಾರ್ಡ್‌ನ ಕರಿಯಮ್ಮನ ಅಗ್ರಹಾರ ಗ್ರಾಮದ ಮಂತ್ರಿ ಎಸ್ಪಾನ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಕ್ಕದ ಖಾಸಗಿ ಪ್ರದೇಶದಲ್ಲಿ ಬಾಂಗ್ಲಾದೇಶದ ನಿವಾಸಿಗಳು ಅನಧಿಕೃತವಾಗಿ ಜೋಪಡಿ ನಿರ್ಮಿಸಿಕೊಂಡಿದ್ದು, ಈ ಪ್ರದೇಶವನ್ನು ಕೊಳಚೆ ಪ್ರದೇಶವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ಹದಗೆಟ್ಟ ವಾತಾವರಣ ಸೃಷ್ಟಿಯಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶೆಡ್‌ಗಳ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಬೇಕಿದೆ. ಈ ಸಮಯದಲ್ಲಿ ಭದ್ರತೆ ಒದಗಿಸಬೇಕು’ ಎಂದು ಕೋರಿ ಅವರು ಇದೇ 18ರಂದು ಮಾರತ್ತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದಿದ್ದರು.

‘ಮಹದೇವಪುರ ವಲಯದ ಜಂಟಿ ಆಯುಕ್ತರು ಹಾಗೂ ವಲಯ ಆಯುಕ್ತರ ಗಮನಕ್ಕೂ ತಾರದೆ, ಅವರ ಅನುಮತಿಯನ್ನೂ ಪಡೆಯದೆಯೇ ಎಇಇ ಅವರು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದು ಕರ್ತವ್ಯಲೋಪ. ಅವರ ಸೇವೆ ಪಾಲಿಕೆಗೆ ಅಗತ್ಯವಿಲ್ಲ. ಅವರನ್ನು ಮಾತೃ ಇಲಾಖೆ ಕಳುಹಿಸುವ ಸಲುವಾಗಿ ನಗರಾಭಿವೃದ್ಧಿ ವಶಕ್ಕೆ ನೀಡಲಾಗಿದೆ’ ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಿದೆ.

ಅಮಾನತಿಗೆ ಶಿಫಾರಸು:ಆಯುಕ್ತರ ಅನುಮತಿ ಪಡೆಯದೆ ಸ್ವ–ಇಚ್ಛೆಯಿಂದ ತೆರವು ಕಾರ್ಯಾಚರಣೆ ನಡೆಸಿರುವ ನಾರಾಯಣ ಸ್ವಾಮಿ ಗಂಭೀರ ಕರ್ತವ್ಯಲೋಪ ಎಸಗಿರುವುದರಿಂದ ಇಲಾಖಾ ವಿಚಾರಣೆ ನಡೆಸಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದೆ.

ಅವರು ಎಸಗಿರುವ ಕರ್ತವ್ಯ ಲೋಪದ ಕರಡು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದೆ.

ಪರ್ಯಾಯ ವ್ಯವಸ್ಥೆ:ಕರಿಯಮ್ಮನ ಅಗ್ರಹಾರದಲ್ಲಿ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು ಅಧಿಕಾರಿಗಳು ನೆಲ ಸಮ ಮಾಡಿರುವ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದು, ಸೂರಿನ ಅಗತ್ಯ ಇರುವವರಿಗೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಬಾಂಗ್ಲಾ ದೇಶಿಯರನ್ನು ಗುರುತಿಸಲು ಸಮೀಕ್ಷೆ ನಡೆಯುತ್ತಿದೆ. ಸ್ಥಳೀಯರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಇದೊಂದು ಸೂಕ್ಷ್ಮ ವಿಷಯವಾಗಿದೆ. ಜಾಗ್ರತೆಯಿಂದ ಪರಿಸ್ಥಿತಿ ನಿಭಾಯಿಸಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಯಾರದ್ದೋ ಜಾಗ; ಯಾರಿಗೋ ಬಾಡಿಗೆ
ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಮಂತ್ರಿ ಇಸ್ಪನ್ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಖುಲ್ಲಾ ಜಾಗ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಆ ಜಾಗ ತಮ್ಮದೇ ಎಂದು ಹೇಳಿಕೊಂಡು ಬಾಡಿಗೆ ನೀಡುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಖುಲ್ಲಾ ಜಾಗದಲ್ಲಿ ತಗಡು ಬಳಸಿ 300ಕ್ಕೂ ಹೆಚ್ಚು ಜೋಪಡಿಗಳನ್ನು ನಿರ್ಮಿಸಲಾಗಿದೆ. ಈ ಜಾಗದಲ್ಲಿ ಸಮರ್ಪಕ ರಸ್ತೆ, ಶೌಚಾಲಯ ಸೇರಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಇಂಥ ಜೋಪಡಿಗಳಲ್ಲೇ ಅಲ್ಲಿಯೇ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರು ಉಳಿದುಕೊಂಡಿದ್ದರು.

ಕೆಲ ಜೋಪಡಿ ಬಳಿ, ‘ಬಾಡಿಗೆಗೆ ಸಂಪರ್ಕಿಸಿ‍’ ಎಂಬ ಬೋರ್ಡ್‌ಗಳನ್ನೂ ನೇತು ಹಾಕಲಾಗಿದೆ. ಅದರಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಬಾಡಿಗೆ ವ್ಯವಹಾರ ಶುರುವಾಗುತ್ತದೆ.

‘ಜಾಗ ಖುಲ್ಲಾ ಇದೆ. ಕೆಲ ಭಾಗದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯವೂ ಇದೆ. ನೈಜ ಮಾಲೀಕರು ಯಾರು ಎಂಬುದಕ್ಕೆ ದಾಖಲೆಗಳು ಇಲ್ಲ. ನಾವೂ ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಾಂಗ್ಲಾದೇಶದವರು ಕೆಲ ಜೋಪಡಿಗಳನ್ನು ಆಶ್ರಯ ಪಡೆದಿದ್ದರು. ಆ ಬಗ್ಗೆ ನಿಖರ ಮಾಹಿತಿ ಪಡೆದು ಪರಿಶೀಲಿಸಲಾಗಿತ್ತು. ಮರುದಿನವೇ ಅವರೆಲ್ಲ ಓಡಿಹೋದರು. ಬಿಬಿಎಂಪಿಯವರು ತೆರವು ಮಾಡಲು ಮುಂದಾಗಿ ರಕ್ಷಣೆ ಕೋರಿದ್ದರು’ ಎಂದು ತಿಳಿಸಿದರು.

ಕಾರ್ಮಿಕರೊಬ್ಬರು, ‘ಮಾಲೀಕ ಹಾಗೂ ಅವರ ಕಡೆಯವರೆಂದು ಹೇಳಿಕೊಂಡು ಬರುವ ವ್ಯಕ್ತಿಯೇ ಕರಾರು ಪತ್ರ ಮಾಡಿಸಿ ಜೋಪಡಿ ಕೀ ಕೊಟ್ಟು ಹೋಗುತ್ತಾರೆ. ಪ್ರತಿ ತಿಂಗಳು ಬಂದು ₹ 3 ಸಾವಿರ ಬಾಡಿಗೆ ಪಡೆಯುತ್ತಾರೆ. ಇಲ್ಲಿರುವ ಎಲ್ಲ ಜೋಪಡಿಗಳನ್ನು ಸೇರಿಸಿದರೆ ಸುಮಾರು ₹9 ಲಕ್ಷ ಬಾಡಿಗೆ ಸಂಗ್ರಹವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.