ADVERTISEMENT

Bengaluru Traffic: ಮಾರತ್‌ಹಳ್ಳಿಯಲ್ಲಿ ವಾಹನಗಳ ಮೊರೆತ– ಜನರ ಪರದಾಟ!

ಹೊರ ವರ್ತುಲ ರಸ್ತೆಯಲ್ಲಿ ವಾರಕ್ಕೆ ನಾಲ್ಕು ದಿನ ಸಮಸ್ಯೆ * ಮರೀಚಿಕೆಯಾದ ಪರಿಹಾರ

ಬಾಲಕೃಷ್ಣ ಪಿ.ಎಚ್‌
Published 7 ಅಕ್ಟೋಬರ್ 2023, 0:00 IST
Last Updated 7 ಅಕ್ಟೋಬರ್ 2023, 0:00 IST
<div class="paragraphs"><p>ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ಜಂಕ್ಷನ್ ಬಳಿ ಹಳೆ ಎಚ್‌ಎಎಲ್ ರಸ್ತೆಯಲ್ಲಿ ವಾಹನ ದಟ್ಟಣೆ. </p></div>

ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ಜಂಕ್ಷನ್ ಬಳಿ ಹಳೆ ಎಚ್‌ಎಎಲ್ ರಸ್ತೆಯಲ್ಲಿ ವಾಹನ ದಟ್ಟಣೆ.

   

ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ

ಬೆಂಗಳೂರು: ಆಮೆಗತಿಯಲ್ಲಿ ಸಾಗುವ ವಾಹನಗಳ ಸಾಲು. ರಸ್ತೆ ದಾಟಲು ಪರದಾಡುವ ಜನ. ಕಳೆದ ಒಂದು ವರ್ಷದಿಂದ ನಗರದ ಹೊರವರ್ತುಲ ರಸ್ತೆಗಳಲ್ಲಿ ಇದು ನಿತ್ಯದ ಗೋಳು.

ADVERTISEMENT

ನೂರಾರು ಐಟಿ–ಬಿಟಿ ಕಂಪನಿಗಳು ಇಲ್ಲಿಯೇ ನೆಲೆ ಕಂಡಿರುವುದು ಒಂದು ಕಾರಣವಾದರೆ, ಮೆಟ್ರೊ ಕಾಮಗಾರಿ ನಡೆಯುತ್ತಿರುವುದು ಎರಡನೇ ಕಾರಣ. ಜೊತೆಗೆ ಜನರಿಗೆ, ಚಾಲಕರಿಗೆ ಅರಿವಿನ ಕೊರತೆಯೂ ದಟ್ಟಣೆ ಹೆಚ್ಚಿಸಿದೆ.

‘ಸೋಮವಾರ ಬೆಳಿಗ್ಗೆ 8ರ ಹೊತ್ತಿಗೆ ವಾಹನದಟ್ಟಣೆ ಶುರುವಾದರೆ ಮಧ್ಯಾಹ್ನದವರೆಗೆ ಇರುತ್ತದೆ. ಮಂಗಳವಾರ ಮತ್ತು ಬುಧವಾರ ವಾಹನ ಜಂಗುಳಿ ನಿರ್ವಹಣೆಯೇ ಕಷ್ಟ. ಈ ಎರಡು ದಿನ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಸಂಜೆಯವರೆಗೂ ವಾಹನದಟ್ಟಣೆ ಇರುತ್ತದೆ. ಗುರುವಾರ ಸ್ವಲ್ಪ ಕಡಿಮೆಯಾಗುತ್ತದೆ. ಶುಕ್ರವಾರ, ಶನಿವಾರ, ಭಾನುವಾರ ವಾಹನಗಳ ಸಂಖ್ಯೆ ಕಡಿಮೆ ಇರುತ್ತದೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

2025ರ ವೇಳೆಗೆ ಮೆಟ್ರೊ ನೀಲಿ ಮಾರ್ಗ ಕಾಮಗಾರಿ ಮುಗಿಸುವ ಗುರಿ ಇರಿಸಿಕೊಳ್ಳಲಾಗಿದೆ. ಮೆಟ್ರೊ ಆರಂಭವಾದರೆ ಶೇ 50ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. ಮಾರತ್‌ಹಳ್ಳಿ ಸೇತುವೆ ಬಳಿ ಉಂಟಾಗುವ ಸಮಸ್ಯೆಯಿಂದಲೇ ಸುತ್ತಲಿನ ರಸ್ತೆಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಈ ಸೇತುವೆ ಬಳಿ ಒಂದು ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್‌) ಇದೆ. ಇನ್ನೊಂದು ಕಡೆಯಿಂದ ಪಾದಚಾರಿ ಮೇಲ್ಸೇತುವೆ ಇಲ್ಲ. ಇದರಿಂದ ಜನರು ರಸ್ತೆ ದಾಟಲು ವಾಹನಗಳ ನಡುವೆಯೇ ನುಗ್ಗುತ್ತಾರೆ. ಒಂದು ವಾಹನ 5 ಸೆಕೆಂಡ್ ನಿಂತರೆ ಅದರ ಹಿಂದಿನ ಎಲ್ಲ ವಾಹನಗಳು ಸಾಲುಗಟ್ಟುತ್ತವೆ.

ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಇಳಿಸಲು, ಹತ್ತಿಸಿಕೊಳ್ಳಲು ರಸ್ತೆಯಲ್ಲಿ ನಿಲ್ಲುವುದು ಕೂಡ ಸಮಸ್ಯೆಗಳನ್ನು ತಂದೊಡ್ಡಿದೆ. ಟಿನ್‌ ಫ್ಯಾಕ್ಟರಿ ಬಳಿ ಬಸ್‌ಗಳು ರಸ್ತೆಯಿಂದ ಸ್ವಲ್ಪ ಒಳಗೆ ಬಂದು ನಿಲ್ಲುವ ರೀತಿಯ ಬಸ್‌ಬೇ ಮಾಡಿದ್ದಾರೆ. ಅದೇ ರೀತಿಯ ವ್ಯವಸ್ಥೆಯನ್ನು ಮಾರತ್‌ ಹಳ್ಳಿ ಸಹಿತ ಎಲ್ಲ ತಂಗುದಾಣಗಳಿಗೆ ಮಾಡಿದರೆ ಬಸ್‌ಗಳು ರಸ್ತೆಯಲ್ಲಿ ನಿಲ್ಲುವುದು ತಪ್ಪಲಿದೆ ಎಂದು ಸಂಚಾರ ಪೊಲೀಸರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬೆಂಗಳೂರು ನಗರದ ಒಳಗೆ ಟ್ರ್ಯಾಕ್ಟರ್‌ಗಳನ್ನು ತರಬಾರದು ಎಂಬ ನಿಯಮ ಮಾಡಲಾಗಿದೆ. ಕೆಲವು ಇಲಾಖೆಗಳಲ್ಲಿಯೂ ಟ್ರ್ಯಾಕ್ಟರ್‌ಗಳಿವೆ. ಹೊರಗಿನಿಂದಲೂ ಟ್ರ್ಯಾಕ್ಟರ್‌ಗಳು ಬರುತ್ತಿರುವುದು ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ. ಇವುಗಳ ಮಧ್ಯೆ ಅರೆ ಚಾಲನೆ ಕಲಿತವರು ದಟ್ಟಣೆ ಹೆಚ್ಚಿರುವ ರಸ್ತೆಗಳಿಗೆ ವಾಹನ ತಂದು ಸಿಕ್ಕಿ ಹಾಕಿಕೊಂಡರೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗುತ್ತಿದೆ.

ಬೆಳಿಗ್ಗೆ 8ರ ನಂತರ ಭಾರಿ ವಾಹನಗಳಿಗೆ ನಗರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಅಲ್ಲೊಂದು, ಇಲ್ಲೊಂದು ಲಾರಿಗಳು ಬಂದು ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ.

ಇಬ್ಬಲೂರು ಮೇಲ್ಸೇತುವೆ ಬಳಿ ವಾಹನ ದಟ್ಟಣೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ.
ಬೆಂಗಳೂರಿನ ಸಿಲ್ಕ್ ಬೋರ್ಡ್ - ಸರ್ಜಾಪುರ ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಉಂಟಾಗಿರುವ ವಾಹನ ದಟ್ಟಣೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ.

ದಟ್ಟಣೆಗೆ ಕಾರಣ

* ಐಟಿ–ಬಿಟಿ ಕಂಪನಿಗಳಲ್ಲಿ ಇದ್ದ ಮನೆಯಿಂದಲೇ ಕೆಲಸ (ವರ್ಕ್ಸ್‌ಫ್ರಂ ಹೋಂ) ಪದ್ಧತಿ ಕೊನೆಗೊಂಡಿದೆ. ಎಲ್ಲರೂ ಕಚೇರಿಗೆ ಬರುತ್ತಿದ್ದಾರೆ.

* ಇಕೊ ವರ್ಲ್ಡ್‌ ಕಂಪನಿಗೆ ಈ ಸೋಮವಾರ 75000 ಮಂಗಳವಾರ 1 ಲಕ್ಷ ಬುಧವಾರ 1.20 ಲಕ್ಷ ವಾಹನಗಳು ಬಂದಿದ್ದವು. ಇದೇ ರೀತಿ ವಿಪ್ರೊಗೆ 10 ಸಾವಿರದಿಂದ 15 ಸಾವಿರವರೆಗೆ ಸಲರ್‌ಪುರಿಯಾ ಸಾಫ್ಟ್‌ಜೋನ್‌ ಕಂಪನಿಗೆ 3500ರಿಂದ 5000 ವಾಹನಗಳು ಬಂದಿವೆ. ಸಾವಿರಕ್ಕೂ ಅಧಿಕ ಕಂಪನಿಗಳು ಮಾರತ್‌ಹಳ್ಳಿ–ಬೆಳಂದೂರು ರಸ್ತೆಯಲ್ಲಿವೆ. ಒಂದೇ ಹೊತ್ತಿಗೆ ಈ ಕಂಪನಿಯ ಉದ್ಯೋಗಿಗಳು ಬರುತ್ತಿರುವುದು ದಟ್ಟಣೆ ಹೆಚ್ಚಿಸಿದೆ.

* ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಅದರ ಅಡಿಯ ರಸ್ತೆಯನ್ನು ಸುರಕ್ಷಿತ ಕಾರಣಕ್ಕೆ ಅಲ್ಲಲ್ಲಿ ಅರ್ಧ ಅಥವಾ ಪೂರ್ತಿ ಮುಚ್ಚಲಾಗುತ್ತಿದೆ. 

* ಕಾಡುಬೀಸನಹಳ್ಳಿ ಸೇತುವೆ ಬಳಿ ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಇಲ್ಲಿ ಅಡ್ಡಾದಿಡ್ಡಿ ವಾಹನಗಳು ನುಗ್ಗಿ ಸಂಚಾರವೇ ನಿಂತು ಬಿಡುತ್ತದೆ. ಇತ್ತ ಮಾರತ್‌ಹಳ್ಳಿ ಕಡೆಗೂ ಬೆಳ್ಳಂದೂರು ಕಡೆಗೂ 4–5 ಕಿಲೋಮೀಟರ್‌ ದೂರ ವಾಹನಗಳು ನಿಂತು ಬಿಡುತ್ತವೆ.

* ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನ ನಿಬಿಡ ರಸ್ತೆಯಲ್ಲೇ ಕಾರು ಪಾರ್ಕ್‌ ಮಾಡಲಾಗುತ್ತದೆ. ಇದರಿಂದ ಸಂಚಾರಕ್ಕೆ ಸಿಗುವ ರಸ್ತೆ ಕಿರಿದಾಗುತ್ತದೆ.

ಜನ ಏನಂತಾರೆ. . .

ಕೆ.ಆರ್‌.ಪುರಂ ರೈಲು ನಿಲ್ದಾಣದಿಂದ ಮಾರತ್‌ ಹಳ್ಳಿಗೆ ಮಂಗಳವಾರ ಮತ್ತು ಬುಧವಾರ ಬರಲು ಒಂದೂವರೆ ತಾಸು ತೆಗೆದುಕೊಳ್ಳುತ್ತಿದೆ. ಬೇರೆ ದಿನಗಳಲ್ಲಿ ಮುಕ್ಕಾಲು ತಾಸಿನ ಒಳಗೆ ತಲುಪುತ್ತೇವೆ. ಮೆಟ್ರೊ ಶುರುವಾದರೆ 15–20 ನಿಮಿಷದಲ್ಲಿ ತಲುಪಲಿದ್ದೇವೆ. 

ಜಯ ಪಾಂಡ್ಯನ್‌ ಕೆಜಿಎಫ್‌ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ

***

ವಾಹನದಟ್ಟಣೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಾರತ್‌ಹಳ್ಳಿ ಯಲ್ಲಿ ನಾವು ಬಸ್‌ ತಂಗುದಾಣಗಳಲ್ಲಿ ನಿಂತು ಬಿಎಂಟಿಸಿ ಬಸ್‌ಗಳಿಗೆ ಕಾಯುತ್ತಿದ್ದರೆ ಪ್ರಯಾಣಿಕರ ದಟ್ಟಣೆ ನೋಡಿ ಬಸ್‌ ನಿಲ್ಲಿಸದೇ ಮುಂದಕ್ಕೆ ಹೋಗುತ್ತಿದ್ದಾರೆ. ಒಂದು ಕಡೆಯಿಂದ ದಟ್ಟಣೆ ಸಮಸ್ಯೆ ಇನ್ನೊಂದು ಕಡೆ ಇಂಥ ನಿರ್ಲಕ್ಷ್ಯದ ಸಮಸ್ಯೆ ನಮ್ಮನ್ನು ಕಾಡುತ್ತಿದೆ.

ಸೂರ್ಯ ಮಾರತ್‌ ಹಳ್ಳಿಯ ಕಂಪನಿ ಉದ್ಯೋಗಿ

***

ಬೆಂಗಳೂರು ಪೂರ್ವಯೋಜಿತ ನಗರವಲ್ಲ. ಅಡ್ಡಾದಿಡ್ಡಿ ಬೆಳೆಯುತ್ತಾ ಹೋಗಿದೆ. ಸದ್ಯ ಕಾಣುವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೋಗುತ್ತಾರೆ. 25–50 ವರ್ಷಗಳ ನಂತರ ಎದುರಾಗುವ ಸಮಸ್ಯೆ ಏನು ಎಂದು ಈಗಲೇ ಯೋಚಿಸಿ ಅದಕ್ಕೆ ತಕ್ಕಂತೆ ರಸ್ತೆಗಳನ್ನು ರೂಪಿಸುವ ಕೆಲಸಗಳಾಗುತ್ತಿಲ್ಲ. ಈಗ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಮೆಟ್ರೊ ಸಂಪೂರ್ಣಗೊಂಡು ಜನರು ಅದರಲ್ಲಿ ಸಂಚರಿಸಲು ಆರಂಭಿಸಿದಾಗ ವಾಹನದಟ್ಟಣೆ ಕಡಿಮೆಯಾಗಲಿದೆ ಎಂಬುದು ಈಗಿನ ವಾದ. ಆದರೆ ಮೆಟ್ರೊ ಆರಂಭವಾಗಲು ಇನ್ನೂ ಎರಡು ವರ್ಷ ಬೇಕು. ಅಷ್ಟು ಹೊತ್ತಿಗೆ ವಾಹನಗಳ ಪ್ರಮಾಣ ಮತ್ತಷ್ಟು ಹೆಚ್ಚಿರುತ್ತದೆ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು.

ಮಂಜುನಾಥ್‌ ಇಸ್ರೊ ಜಂಕ್ಷನ್‌ ಕಾರ್ತಿಕ್‌ನಗರ

***

ವಾಹನ ಸಂಚಾರದಲ್ಲಿ ಸಿಲುಕಿಕೊಂಡರೆ ನಮಗೆ ಸಿಗುವ ಬಾಡಿಗೆಯು ಗ್ಯಾಸ್‌ ತುಂಬಿಸಲೂ ಸಾಕಾಗುವುದಿಲ್ಲ. ಅಲ್ಲದೇ ಗ್ಯಾಸ್‌ ಬೆಲೆ ಮೂರು ದಿನಗಳಲ್ಲಿ ಕೆ.ಜಿ.ಗೆ ₹ 8 ಜಾಸ್ತಿಯಾಗಿದೆ. ಅದಕ್ಕಾಗಿಯೇ ಮಾರತ್‌ ಹಳ್ಳಿ ಬೆಳಂದೂರು ರಸ್ತೆಗೆ ಆಟೊದವರು ಬರಲು ಹಿಂಜರಿಯುತ್ತಿದ್ದಾರೆ.

-ಮಂಜು ಆಟೊ ಚಾಲಕ ಕಾಡುಬೀಸನಹಳ್ಳಿ

***

ಬೊಮ್ಮನಹಳ್ಳಿ ಬಿಟಿಎಂ ಲೇಔಟ್‌ ಎಚ್‌ಎಸ್‌ಆರ್‌ ಲೇಔಟ್‌ ಹೀಗೆ ಎಲ್ಲ ಕಡೆಗಳಿಂದ ವಾಹನಗಳು ನುಗ್ಗುತ್ತಿರುವುದರಿಂದ ಮಡಿವಾಳದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಸರಿ ಮಾಡಬಹುದು.

ಸುರೇಶ್‌ ಆಟೊ ಚಾಲಕ ಮಡಿವಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.