ಬೆಂಗಳೂರು: ‘ಪೌರಕಾರ್ಮಿಕರ ಕಾಯಂಗಾಗಿ ನೇಮಕಾತಿ ಪ್ರಕ್ರಿಯೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದು ಪೂರ್ಣವಾದ ಕೂಡಲೇ ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘3,500 ಪೌರಕಾರ್ಮಿಕ ನೇಮಕಾತಿ ನಡೆಯುತ್ತಿದೆ. ಇನ್ನೂ 11,500 ಮಂದಿ ನೇಮಕಾತಿಗೆ ನಿಯಮಗಳ ಬದಲಾವಣೆ ಮಾಡಲಾಗುತ್ತಿದೆ. ಶೀಘ್ರವೇ ಈ ನೇಮಕಾತಿಗೂ ಅಧಿಸೂಚನೆಯೂ ಆಗುತ್ತದೆ ಎಂದರು.
‘ಬಿಬಿಎಂಪಿ ಒಂದೇ ಕುಟುಂಬ. ಕೆಲಸಕ್ಕಾಗಿ ವಿಭಾಗಗಳಿರಬಹುದು, ಸಂಘಗಳಿರಬಹುದು. ಇಂದು ನಾವು ಮಾನವತಾವಾದಿ ಅಂಬೇಡ್ಕರ್ ಅವರ ಹಬ್ಬ ಆಚರಿಸುತ್ತಿದ್ದೇವೆ. ಅವರ ಕನಸು ನನಸಾಗಲು ಕೆಲಸ ಮಾಡಬೇಕು. ಕ್ಷಿಪ್ರಗತಿಯಲ್ಲಿ ಈ ನಿಟ್ಟಿನಲ್ಲಿ ಮುನ್ನಡೆಯಬೇಕು. ಇಂದು ಒಗ್ಗಟ್ಟಾಗಿ ಎಲ್ಲ ಸೇರಿದ್ದೇವೆ. ಇದು ನಮ್ಮ ಶಕ್ತಿ. ನಮ್ಮಲ್ಲಿ ಕಷ್ಟ, ನ್ಯೂನತೆಗಳು ಇರುತ್ತವೆ. ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ನೀವು ಭಾವನೆಯಿಂದ ಬೇಡಿಕೆ ಇಟ್ಟರೆ ಅದನ್ನು ನಾವು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ತುಷಾರ್ ಗಿರಿನಾಥ್ ಹೇಳಿದರು.
ಅಭಿನಂದನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ 15 ಪೌರಕಾರ್ಮಿಕರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಡಾ. ಹರೀಶ್ ಕುಮಾರ್, ಡಾ. ಆರ್.ಎಲ್ ದೀಪಕ್, ಪಿ.ಎನ್. ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.