ಬೆಂಗಳೂರು: ‘ಹೋಬಳಿಗೊಂದು ವಸತಿ ಶಾಲೆ ಸರ್ಕಾರದ ಗುರಿಯಾಗಿದೆ. ಆದ್ದರಿಂದ, ಈ ವರ್ಷ 20 ಹೊಸ ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಬುಧವಾರ ನಡೆದ 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
‘ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ್ದ ‘ನಮಗೆ ಸಾರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು’ ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್‌ನಲ್ಲೇ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಆರಂಭಿಸಿದೆ. ಅಂದಿನಿಂದ ನಿರಂತರವಾಗಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪಸಂಖ್ಯಾತ ಇಲಾಖೆಯಡಿ ಸೇರಿ ಒಟ್ಟು 946 ವಸತಿ ಶಾಲೆಗಳಿವೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ, ಪೋಷಕರು, ಶಿಕ್ಷಕರು ಮೊದಲು ಕಂದಾಚಾರ, ಮೌಢ್ಯಾಚರಣೆಯಿಂದ ಹೊರಗಡೆ ಬರಬೇಕು. ಆಗ, ಮಕ್ಕಳು ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಜಾತಿ ವ್ಯವಸ್ಥೆ ಶಿಥಿಲವಾಗಬೇಕಾದರೆ ದಲಿತರು, ಹಿಂದುಳಿದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಬೇಕು’ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ‘ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಮೌಲ್ಯಾಧಾರಿತ, ವೈಚಾರಿಕತೆಯಿಂದ ಕೂಡಿದ ಶಿಕ್ಷಣ ನೀಡಲಾಗುತ್ತಿದೆ’ ಎಂದರು.
2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊನ್ನೂರು ಅವರಿಗೆ ₹5 ಲಕ್ಷ, ತೃತೀಯ ಸ್ಥಾನ ಪಡೆದ ನವನೀತ್ ಕೆ.ಸಿ. ಅವರಿಗೆ ₹3 ಲಕ್ಷ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹೆಚ್ಚು ಅಂಕಗಳಿಸಿದ 162 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಾಸಕ ಸುದಾಮ್ ದಾಸ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಭಾಗವಹಿಸಿದ್ದರು.
ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 96ರಷ್ಟು ಫಲಿತಾಂಶ ಪಡೆದಿದ್ದಾರೆ. ಮುಂದಿನ ಬಾರಿ ಇದು ಶೇ 100 ರಷ್ಟು ಅಂಕ ಪಡೆಯಬೇಕು.ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.