ADVERTISEMENT

ಪಿಇಎಸ್‌ನಲ್ಲಿ ಕೌಶಲಾಭಿವೃದ್ಧಿ ಕೋರ್ಸ್‌: ಪ್ರೊ.ಜವಾಹರ್ ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 22:56 IST
Last Updated 2 ಅಕ್ಟೋಬರ್ 2024, 22:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಗ್ರಾಮೀಣ ಭಾಗದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿಗೆ ನೆರವಾಗುವ, ಅಲ್ಪಾವಧಿ ಕೋರ್ಸ್‌ಗಳನ್ನು ಬಜಾಜ್‌ ಕಂಪನಿಯ ಸಹಯೋಗದಲ್ಲಿ ಆರಂಭಿಸಲಾಗಿದೆ’ ಎಂದು ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜಾಜ್‌ ಕಂಪನಿಯು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆ ಅಡಿಯಲ್ಲಿ ‘ಬಜಾಜ್‌ ಎಂಜಿನಿಯರಿಂಗ್ ಕೌಶಲ ತರಬೇತಿ (ಬೆಸ್ಟ್‌)’ ಕಾರ್ಯಕ್ರಮ ಆಯೋಜಿಸಿದೆ’ ಎಂದರು.

ADVERTISEMENT

‘ಇದರ ಭಾಗವಾಗಿ ಪಿಇಎಸ್‌ ಕ್ಯಾಂಪಸ್‌ನಲ್ಲಿ ಜಾಗತಿಕ ಗುಣಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಮೆಕಾಟ್ರಾನಿಕ್ಸ್‌, ಮೋಷನ್‌ ಕಂಟ್ರೋಲ್‌ ಅಂಡ್‌ ಸೆನ್ಸರ್‌ ಟೆಕ್ನಾಲಜಿ, ರೊಬಿಟಿಕ್ಸ್‌ ಮತ್ತು ಆಟೊಮೇಷನ್‌ ಹಾಗೂ ಇಂಡಸ್ಟ್ರಿ 4.0 ಸ್ಮಾರ್ಟ್‌ ಮ್ಯಾನುಫಾಕ್ಚರಿಂಗ್‌ ಎಂಬ ನಾಲ್ಕು ಪ್ರಮುಖ ವಿಭಾಗಗಳಿವೆ. ಪ್ರತಿ ವಿಭಾಗದಲ್ಲೂ ತಲಾ ನಾಲ್ಕರಂತೆ ಒಟ್ಟು 16 ಪ್ರಯೋಗಾಲಯಗಳಿವೆ’ ಎಂದು ತಿಳಿಸಿದರು.

‘ಸದ್ಯ ತಯಾರಿಕಾ ವಲಯದಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನ, ತಾಂತ್ರಿಕತೆ ಮತ್ತು ಯಂತ್ರೋಪಕರಣಗಳನ್ನು ಪ್ರತಿ ಪ್ರಯೋಗಾಲಯವೂ ಹೊಂದಿವೆ. ಈ ಯಂತ್ರೋಪಕರಣಗಳ ಕಾರ್ಯನಿರ್ವಹಣೆ, ಪ್ರಾಯೋಗಿಕ ಬಳಕೆ ಮತ್ತು ರಿಪೇರಿಯನ್ನೂ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ. ತಯಾರಿಕಾ ವಲಯದ ಕೈಗಾರಿಕೆಗಳಲ್ಲಿ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಬೇಕಾದ ಸ್ಥಿತಿಯಲ್ಲೇ ತರಬೇತಿ ನೀಡಲಾಗುತ್ತದೆ’ ಎಂದರು.

‘ಎಂಜಿನಿಯರಿಂಗ್‌ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆರು ತಿಂಗಳ ಕೋರ್ಸ್‌ ಮತ್ತು ಡಿಪ್ಲೊಮಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾಲ್ಕು ತಿಂಗಳ ಕೋರ್ಸ್‌ ನೀಡಲಾಗುತ್ತಿದೆ. ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.