ADVERTISEMENT

ಪಿಇಎಸ್‌ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆ ಕೇಸ್: ಪ‍್ರಚೋದನೆ ನೀಡಿಲ್ಲವೆಂದ ವಿವಿ

ಪಿಇಎಸ್‌ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 20:31 IST
Last Updated 22 ಜುಲೈ 2023, 20:31 IST
ಆದಿತ್ಯ
ಆದಿತ್ಯ    

ಬೆಂಗಳೂರು: ‘ಪರೀಕ್ಷೆ ವೇಳೆ ವಿದ್ಯಾರ್ಥಿ ತಪ್ಪು ಎಸಗಿದಾಗ ತಿಳಿಹೇಳುವ ಕೆಲಸ ಮಾಡಿದ್ದೇವೆಯೇ ಹೊರತು ಆತ್ಮಹತ್ಯೆಗೆ ಪ‍್ರಚೋದನೆ ನೀಡಿಲ್ಲ’ ಎಂದು ವಿದ್ಯಾರ್ಥಿ ಆದಿತ್ಯ ಪ್ರಭು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಇಎಸ್‌ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

‘ಸದ್ಯ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ವಿಚಾರ ಬಹಿರಂಗವಾಗಿ ಹೇಳುವುದು ಕಾನೂನಿನ ಪ್ರಕಾರ ತಪ್ಪು. ಆದರೆ, ಸತ್ಯಾಂಶವನ್ನು ವರದಿ ಮೂಲಕ ತನಿಖಾ ಸಮಿತಿಗೆ ಸಲ್ಲಿಸಿದ್ದೇವೆ’ ಎಂದು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ತಿಳಿಸಿದ್ದಾರೆ.

‘ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿರುವ ಬಗ್ಗೆ ಕಾಲೇಜಿಗೂ ಅತೀವ ಬೇಸರವಿದೆ.  ಆದಿತ್ಯ ಉತ್ತಮ ವಿದ್ಯಾರ್ಥಿಯಾಗಿದ್ದ. ಶೈಕ್ಷಣಿಕವಾಗಿಯೂ ಮುಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿಚಾರಕ್ಕೆ ನಮ್ಮ ಖಂಡನೆ ಇದೆ’ ಎಂದು ಹೇಳಿದ್ದಾರೆ.

ADVERTISEMENT

‘ಜುಲೈ 17ರಂದು ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಿದ್ದ. ಆ ವೇಳೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಬಳಕೆ ಮಾಡಿದ್ದರಿಂದ ಬುದ್ಧಿ ಹೇಳಲಾಗಿತ್ತು. ಪ್ರಕರಣ ಸಂಬಂಧ ವಿದ್ಯಾರ್ಥಿ ಪೋಷಕರು ದೂರು ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿರುವಾಗ ವಿಶ್ವವಿದ್ಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮೌನ ವಹಿಸಲಾಗಿತ್ತು. ಆದರೆ, ಮಾಧ್ಯಮಗಳಲ್ಲಿ ತಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ನಡೆಯ ಬಗ್ಗೆ ಬೇರೆ ರೀತಿಯಲ್ಲಿ ಆರೋಪ ಮಾಡಲಾಗುತ್ತಿದೆ. ಸ್ಪಷ್ಟನೆ ನೀಡುವುದು ವಿ.ವಿಯ ಕರ್ತವ್ಯ. ಅಧಿಕಾರಿಗಳಿಗೂ ಹೃದಯವಿದೆ. ಮಾನವೀಯತೆ ಇದೆ’ ಎಂದು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ನೀಡಲಾಗಿದೆ. ಇದರಿಂದ ಸತ್ಯಾಂಶ ಹೊರಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.