ಬೆಂಗಳೂರು: ‘ಪಿಇಎಸ್ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಭಾನುವಾರ (ನ.8) ನಡೆಯಲಿದ್ದು, 2,031 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. 14 ಮಂದಿಗೆ ಚಿನ್ನದ ಪದಕ ಹಾಗೂ 59 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನುಸಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಅಂದು ಬೆಳಿಗ್ಗೆ 11 ಗಂಟೆಗೆ ಪ್ರೊ.ಎಂ.ಆರ್.ಡಿ ಕಟ್ಟಡದ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕೋವಿಡ್ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಾಗಿಲ್ಲ. ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದಕ ವಿಜೇತ ಅಭ್ಯರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳಿಗೆ ಮಾತ್ರ ಪ್ರವೇಶಾತಿ ಇರಲಿದೆ. ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಾರ್ಯಕ್ರಮದ ಮೂಲಕ ಪದವಿಗಳನ್ನು ಪ್ರದಾನ ಮಾಡಲಾಗುವುದು’ ಎಂದರು.
‘ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಸಂಶೋಧನಾ ಅಭ್ಯರ್ಥಿ
ಗಳಾದ ರಾಜೇಶ್ವರಿ ಆರ್. ಮತ್ತು ಮೈತ್ರಿ ಆರ್. ಪಿಎಚ್.ಡಿ ಪದವಿ ಪಡೆಯಲಿದ್ದಾರೆ. ಕೋವಿಡ್ ನಡುವೆಯೂ ನಮ್ಮಲ್ಲಿ ಕ್ಯಾಂಪಸ್ ಆಯ್ಕೆ ಆನ್‌ಲೈನ್ ಮೂಲಕ ನಡೆಯುತ್ತಿದ್ದು, 64 ಕಂಪನಿಗಳು ಬಂದಿವೆ. ಆರು ಮಂದಿಗೆ ಈಗಾಗಲೇ ಮೈಕ್ರೋಸಾಫ್ಟ್ ಕಂಪನಿಯು ₹ 43.07 ಲಕ್ಷದ ಪ್ಯಾಕೇಜ್ ನೀಡಿದೆ. ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ 508 ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ’ ಎಂದು ವಿವರಿಸಿದರು.
₹ 5.36 ಕೋಟಿ ವಿದ್ಯಾರ್ಥಿ ವೇತನ: ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರ ವಾಗಲಿದೆ. 2019–20ನೇ ಸಾಲಿನಲ್ಲಿ 5,178 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಇದರ ಮೊತ್ತವು ₹ 5.36 ಕೋಟಿ ಆಗಲಿದೆ’ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ಸೂರ್ಯಪ್ರಸಾದ್ ಜೆ., ಕುಲಸಚಿವ ಡಾ.ಕೆ.ಎಸ್.ಶ್ರೀಧರ್ ಇದ್ದರು.
‘ಪ್ರವೇಶ ಶುಲ್ಕ ಶೇ 10ರಷ್ಟು ಕಡಿತ’
‘ಕೋವಿಡ್ ಕಾರಣ ಪಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವವರ ಪ್ರವೇಶ ಶುಲ್ಕದಲ್ಲಿ ಶೇ 10ರಷ್ಟು ಕಡಿತ ಮಾಡಲಾಗಿದೆ. ಎರಡು ಕಂತುಗಳಲ್ಲಿ ಪಾವತಿಸಲು ಕೂಡ ಅವಕಾಶ ನೀಡಿದ್ದೇವೆ’ ಎಂದು ಡಾ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.