ಬೆಂಗಳೂರು: ‘ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ‘ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ’ದಿಂದ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಸಾಧ್ಯ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಪಿಇಎಸ್ ವಿಶ್ವವಿದ್ಯಾಲಯ ನಗರದಲ್ಲಿ ಶುಕ್ರವಾರ ಆಯೋಜಿಸಿದ ‘ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮ’ ಸಮಾವೇಶದಲ್ಲಿ ಮಾತನಾಡಿದರು.
‘ನಮ್ಮ ದೇಶದ ದೊಡ್ಡ ಶಕ್ತಿ ವಿದ್ಯಾವಂತ ಯುವ ಮಾನವ ಸಂಪನ್ಮೂಲ. ದೇಶದಲ್ಲಿ 3,500 ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿದ್ದು, ಇಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ‘ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ’ ಸಹಕಾರಿಯಾಗಲಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿಯ ನಂತರ 3ರಿಂದ 6 ತಿಂಗಳ ಅಧ್ಯಾಪಕರ ತರಬೇತಿ ಕಾರ್ಯಕ್ರಮವನ್ನು ನಡೆಸುವುದು ಉತ್ತಮ. ಬೋಧನೆ-ಕಲಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವು ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಮ್, ‘ಶಿಕ್ಷಣ, ವೈದ್ಯಕೀಯ, ಆಟೋಮೊಬೈಲ್, ಕೈಗಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ತಂತ್ರಜ್ಞಾನ ದಿನದಿಂದ ದಿನಕ್ಕೆ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳುತ್ತಿದೆ. ಐಐಟಿ ಸೇರಿದಂತೆ ನಮ್ಮ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ‘ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ’ವನ್ನು ಕಡ್ಡಾಯ ಪ್ರಕ್ರಿಯೆಯನ್ನಾಗಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.