ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯವು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ನಾಲ್ಕು ಶಾಲೆಗಳಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿದೆ. ಮುಧೋಳ ಹಾಗೂ ಬಾದಾಮಿ ತಾಲ್ಲೂಕುಗಳಲ್ಲಿ ನಾಲ್ಕು ಶಾಲೆಗಳನ್ನು ನವೀಕರಣಗೊಳಿಸಿದೆ. ಇದೇ 26ರಂದು ಅಥಣಿಯ ತೀರ್ಥದಲ್ಲಿ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ, ‘ಅಥಣಿ ತಾಲ್ಲೂಕಿನ ತೀರ್ಥ, ಮಹಿಷವಾಡಗಿ, ಹಸಿರೇ ತೋಟ–ನಿಲಜಿ ಹಾಗೂ ಪೇರಲತೋಟ–ನದಿಇಂಗಳಗಾಂವ್‌ಗಳಲ್ಲಿ ಶಾಲೆಗಳಹೊಸ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಮುಧೋಳ ತಾಲ್ಲೂಕಿನ ಒಂಟಗೋಡಿ, ಬಿ.ಕೆ.ಬುದ್ನಿ (ಇಲ್ಲಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ) ಮತ್ತು ಬಾದಾಮಿಯ ಕರ್ಲಕೊಪ್ಪದ ಶಾಲೆಗಳನ್ನು ನವೀಕರಣ ಮಾಡಿದ್ದೇವೆ. ಇದಕ್ಕಾಗಿ ಒಟ್ಟು ₹4.31 ಕೋಟಿ ಮೊತ್ತ ವಿನಿಯೋಗಿಸಿದ್ದೇವೆ. ಪೀಠೋಪಕರಣ, ಕಂಪ್ಯೂಟರ್, ಪುಸ್ತಕ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸಲು ₹1.5 ಕೋಟಿ ಹೆಚ್ಚುವರಿ ವೆಚ್ಚ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಕಂಪ್ಯೂಟರ್ ಕೇಂದ್ರ, ಗ್ರಂಥಾಲಯದ ಉದ್ಘಾಟನೆಯೂ26ರಂದು ನಡೆಯಲಿದೆ. ಅಥಣಿಯ ನಾಲ್ಕು ಶಾಲೆಗಳ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್‌ಗಳನ್ನು ವಿತರಿಸಲಾಗುತ್ತದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಂಗ್ರಹಿಸಿರುವ ಸಣ್ಣ ಕಥೆಗಳನ್ನೊಳಗೊಂಡ ‘ಕಥಾಲೋಕ’ ಪುಸ್ತಕವೂ ಅಂದೇ ಬಿಡುಗಡೆಯಾಗಲಿದೆ’ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಕೆ.ಎಸ್.ಶ್ರೀಧರ್,‘ವಿಶ್ವವಿದ್ಯಾಲಯದಲ್ಲಿ ಕಲಿತ ಒಟ್ಟು 1,193 ಬಿ.ಟೆಕ್.ವಿದ್ಯಾರ್ಥಿಗಳಿಗೆ ಈ ವರ್ಷ ವಿವಿಧ ಕಂಪನಿಗಳಲ್ಲಿ ಕೆಲಸ ಸಿಕ್ಕಿಎದ.ಈವರೆಗೂ 220 ವಿವಿಧ ಕಂಪನಿಗಳು ನಮ್ಮ ಕ್ಯಾಂಪಸ್‌ಗೆ ಭೇಟಿ ನೀಡಿವೆ. ಈ ವರ್ಷ 941 ವಿದ್ಯಾರ್ಥಿಗಳಿಗೆ 150 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ಲಭಿಸಿದೆ’ ಎಂದು ವಿವರಿಸಿದರು.
‘ಮುಂದಿನ ವರ್ಷ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಬಿ.ಎ), ಬ್ಯುಸಿನೆಸ್ ಅನಾಲೆಟಿಕ್ (ಬಿಬಿಎ), ಎಸಿಸಿಎ (ಬಿ.ಕಾಂ) ಸೇರಿದಂತೆ ಹಲವು ಕೋರ್ಸ್‌ಗಳನ್ನು ನಾವು ಪರಿಚಯಿಸುತ್ತಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.