ಬೆಂಗಳೂರು: ಪ್ರತಿ ಲೀಟರ್‌ಗೆ 50 ಪೈಸೆ ಕಡಿಮೆ ದರ, ಲಾರಿಗಳಿಗೆ ಉಚಿತವಾಗಿ ಗಾಳಿ ತುಂಬಿಸುವ ವ್ಯವಸ್ಥೆ, ಸಿಬ್ಬಂದಿಗೆ ಮೂರು ಹೊತ್ತಿನ ಊಟ...
ಇದು ಬೆಂಗಳೂರು ನಗರದಲ್ಲಿರುವ ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ಸ್ ನಡೆಸುತ್ತಿರುವ ಪೆಟ್ರೋಲ್ ಬಂಕ್‌ನಲ್ಲಿ ಇರುವ ಸವಲತ್ತು. ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಭಾಗಿತ್ವದಲ್ಲಿ ಈ ಪೆಟ್ರೊಲ್ ಬಂಕ್ ಅನ್ನು 1996ರಿಂದ ಫೆಡರೇಷನ್ ನಿರ್ವಹಿಸುತ್ತಿದೆ.
ಕಂಠೀರವ ಸ್ಟುಡಿಯೋ ಸಮೀಪದ ರಿಂಗ್ ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿ ಈ ಬಂಕ್ ಇದೆ. ಯಶವಂತಪುರ ಎಪಿಎಂಸಿ ಸಮೀಪದಲ್ಲೇ ಇರುವ ಕಾರಣ ಬಹುತೇಕ ಲಾರಿಗಳು ಈ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತವೆ. ದಿನಕ್ಕೆ 45 ಸಾವಿರದಿಂದ 50 ಸಾವಿರ ಲೀಟರ್ ಡೀಸೆಲ್ ಮಾರಾಟವಾಗುತ್ತದೆ. 7 ಸಾವಿರದಿಂದ 8 ಸಾವಿರ ಲೀಟರ್ ಪೆಟ್ರೋಲ್ ಮಾರಾಟವಾಗುತ್ತದೆ. 10 ಲೀಟರ್‌ಗಿಂತ ಹೆಚ್ಚಿನ ಡೀಸೆಲ್ ತುಂಬಿಸಿಕೊಂಡರೆ ಪ್ರತಿ ಲೀಟರ್‌ಗೆ 50 ಪೈಸೆ ರಿಯಾಯಿತಿ ಸಿಗಲಿದೆ.
‘ಒಂದು ಲೀಟರ್ ಡೀಸೆಲ್‌ಗೆ ₹1.85 ಕಮಿಷನ್ ರೂಪದಲ್ಲಿ ಫೆಡರೇಷನ್‌ಗೆ ಬಿಪಿಸಿಎಲ್ ನೀಡುತ್ತದೆ. ಅದರಲ್ಲಿ 50 ಪೈಸೆ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಉಳಿದ ₹1.35 ರಲ್ಲಿ ಬಂಕ್ ನಿರ್ವಹಣೆ ಮಾಡಲಾಗುತ್ತದೆ. ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ’ ಎಂದು ಫೆಡರೇಷನ್ ಅಧ್ಯಕ್ಷ ಬಿ. ಚನ್ನಾರೆಡ್ಡಿ ತಿಳಿಸಿದರು.
ಬಂಕ್‌ನಲ್ಲಿ 50 ನೌಕರರಿದ್ದು, ಅವರಿಗೆ ಕಾರ್ಮಿಕ ಇಲಾಖೆ ಮಾರ್ಗಸೂಚಿಗಳ ಪ್ರಕಾರ ವೇತನ, ಪಿಎಫ್ ಸೌಲಭ್ಯವನ್ನು ಫೆಡರೇಷನ್ ನೀಡುತ್ತಿದೆ. ಕರ್ತವ್ಯದಲ್ಲಿ ಇರುವ ಸಿಬ್ಬಂದಿಗೆ ಮೂರು ಹೊತ್ತಿನ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ. ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹಗಳನ್ನೂ ಫೆಡರೇಷನ್ ನಿರ್ಮಿಸಿದೆ. ಈ ಎಲ್ಲ ಸವಲತ್ತುಗಳನ್ನು ಕಲ್ಪಿಸಿರುವ ಕಾರಣಕ್ಕೆ ನಿರ್ವಹಣೆಯಲ್ಲಿ ಬೆಂಗಳೂರಿನ ನಂಬರ್– 1 ಬಂಕ್ ಎಂಬ ಪ್ರಮಾಣ ಪತ್ರವನ್ನೂ ಬಿಪಿಸಿಎಲ್ ನೀಡಿದೆ.
ಬಂಕ್‌ಗಳಿಗೆ ಬರುವ ಲಾರಿ ಚಕ್ರಗಳಿಗೆ ಉಚಿತವಾಗಿ ಗಾಳಿ ತುಂಬಿಸಿಕೊಳ್ಳುವ ವ್ಯವಸ್ಥೆ ಇದೆ. ನೀರು ಶುದ್ಧೀಕರಣ ಘಟಕವನ್ನೂ ಸ್ಥಾಪಿಸಲಾಗಿದ್ದು, ದೂರದ ಊರುಗಳಿಗೆ ಹೋಗುವ ಲಾರಿಗಳ ಚಾಲಕರು ಬೇಕಾದಷ್ಟು ಕ್ಯಾನ್‌ಗಳ ನೀರನ್ನು ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಚನ್ನಾರೆಡ್ಡಿ ಹೇಳಿದರು.
‘ಪೆಟ್ರೋಲ್ ಬಂಕ್‌ಗಳ ಸಿಬ್ಬಂದಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನುಭವ ಆಗಬೇಕು ಎಂಬ ಕಾರಣಕ್ಕೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಫೆಡರೇಷನ್‌ಗೆ ಈ ಬಂಕ್‌ನಿಂದ ಲಾಭ ಗಳಿಸಬೇಕು ಎಂಬ ಉದ್ದೇಶ ಇಲ್ಲ. ಹೀಗಾಗಿ, ಕಮಿಷನ್ ಹಣವನ್ನು ಬಂಕ್ ಸಿಬ್ಬಂದಿಗೆ ಮತ್ತು ಲಾರಿ ಮಾಲೀಕರ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತಿದೆ’ ಎಂದು ತಿಳಿಸಿದರು.
ಉಚಿತ ಚಾಲನಾ ಪರವಾನಗಿ
ಲಾರಿ ಚಾಲಕರಿಗೆ ಉಚಿತವಾಗಿ ಚಾಲನಾ ಪರವಾನಗಿಯನ್ನೂ ಫೆಡರೇಷನ್ ನೀಡುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 400 ಚಾಲಕರು ಇದರ ಉಪಯೋಗ ಪಡೆದುಕೊಂಡಿದ್ದಾರೆ.
‘ಲಾರಿಗಳಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದವರು ಚಾಲಕರಾಗುತ್ತಾರೆ. ಬಹುತೇಕರು ಚಾಲನಾ ಪರವಾನಗಿ ಪಡೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಅಪಘಾತವಾದರೂ ಚಾಲಕರು ಸಮಸ್ಯೆಗೆ ಸಿಲುಕುತ್ತಾರೆ. ಅದನ್ನು ತಪ್ಪಿಸಲು ಫೆಡರೇಷನ್‌ನಿಂದಲೇ ಉಚಿತವಾಗಿ ಪರವಾನಗಿ ಕೊಡಿಸುವ ಕೆಲಸವನ್ನು ಆರಂಭಿಸಿದ್ದೇವೆ’ ಎಂದು ಚನ್ನಾರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.