ADVERTISEMENT

ಪಿ.ಜಿ ಸುರಕ್ಷತಾ ಮಾರ್ಗಸೂಚಿ ಸಡಿಲಿಕೆ ಪರಿಶೀಲನೆ: ಸುರಳ್ಕರ್ ವಿಕಾಸ್‌ ಕಿಶೋರ್‌

ಜಾಗೃತಿ ಸಮಾವೇಶದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಸ್‌ ಕಿಶೋರ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 23:04 IST
Last Updated 17 ಅಕ್ಟೋಬರ್ 2024, 23:04 IST
ಪಿ.ಜಿ ಮಾಲೀಕರ ಜಾಗೃತಿ ಸಮಾವೇಶದಲ್ಲಿ ಪಿ.ಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ. ಟಿ. ಅರುಣ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಮತ್ತು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು
- ಪ್ರಜಾವಾಣಿ ಚಿತ್ರ
ಪಿ.ಜಿ ಮಾಲೀಕರ ಜಾಗೃತಿ ಸಮಾವೇಶದಲ್ಲಿ ಪಿ.ಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ. ಟಿ. ಅರುಣ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಮತ್ತು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೇಯಿಂಗ್‌ ಗೆಸ್ಟ್‌ಗಳ (ಪಿ.ಜಿ) ಸುರಕ್ಷತಾ ಮಾರ್ಗಸೂಚಿಗಳ ಅಳವಡಿಕೆಗೆ ಗಡುವು ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಕೆಲ ಮಾರ್ಗಸೂಚಿಗಳನ್ನು ಸಡಿಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಬಿಬಿಎಂ‍ಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್‌ ಕಿಶೋರ್‌ ಹೇಳಿದರು.

ಪಿ.ಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ  ಬುಧವಾರ ಇಲ್ಲಿ ಆಯೋಜಿಸಿದ್ದ, ‘ಪಿ.ಜಿ ಮಾಲೀಕರ ಜಾಗೃತಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಿ.ಟಿ.ಅರುಣ್‌ ಕುಮಾರ್, ‘ಬಿಬಿಎಂಪಿ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಅವುಗಳನ್ನು ಪಾಲಿಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಬೇಕು’ ಎಂದು ವಿಶೇಷ ಆಯುಕ್ತರನ್ನು ಕೋರಿದರು.

ADVERTISEMENT

ಜೊತೆಗೆ, ‘ಪಿ.ಜಿಗಳಲ್ಲಿನ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು 90 ದಿನಗಳು ಇರಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಇದನ್ನು 30 ದಿನಗಳಿಗೆ ಇಳಿಸಬೇಕು. ಅಗ್ನಿ ಅವಘಡ ಸುರಕ್ಷತೆಗೆ ನಿರಾಕ್ಷೇಪಣಾ ಪತ್ರ ಪಡೆಯುವ ನಿಯಮವನ್ನು ಸಡಿಲಿಸಬೇಕು. ಪಿ.ಜಿ. ಆರಂಭಕ್ಕೆ ಪರವಾನಗಿ ನೀಡುವ ನಿಯಮಗಳು ಮತ್ತು ಪ್ರಕ್ರಿಯೆ ಕಠಿಣವಾಗಿವೆ. ಈ ಕಾರಣದಿಂದಲೇ ನೂರಾರು ಪಿ.ಜಿ.ಗಳಿಗೆ ಪರವಾನಗಿ ದೊರೆಯುತ್ತಿಲ್ಲ. ಇದರಿಂದ ಮಾಲೀಕರು ಅಧಿಕಾರಿಗಳಿಂದ ಕಿರುಕುಳ ಎದುರಿಸಬೇಕಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಕಾಸ್‌ ಕಿಶೋರ್ ಅವರು, ‘ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯನ್ನು 30 ದಿನಗಳವರೆಗೆ ಇರಿಸಿಕೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 21 ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಲ್ಲಿ ಇರುವ ಪಿ.ಜಿ.ಗಳಿಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯವಿಲ್ಲ. ಆದರೆ ಬೆಂಕಿ ನಂದಕಗಳನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಿರುವ ಸವಲತ್ತುಗಳನ್ನು ಹೊಂದಿರಬೇಕು’ ಎಂದರು.

‘ಭದ್ರತೆ ಕಡೆಗಣಿಸಲು ಅವಕಾಶವಿಲ್ಲ. ಒಬ್ಬ ಭದ್ರತಾ ಸಿಬ್ಬಂದಿ ನೇಮಿಸಬೇಕು. ಅವರ ಆಧಾರ್ ಮತ್ತು ಗುರುತಿನ ಚೀಟಿ ವಿವರಗಳನ್ನು ಬಿಬಿಎಂಪಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಅವರಿಗೆ ಸಮವಸ್ತ್ರ ಒದಗಿಸಬೇಕು. ಕರ್ತವ್ಯದಲ್ಲಿ ಸಮವಸ್ತ್ರದಲ್ಲೇ ಇರಬೇಕು’ ಎಂದರು.

2,000ಕ್ಕೂ ಹೆಚ್ಚು ಪಿ.ಜಿ ಮಾಲೀಕರು ಸಮಾವೇಶದಲ್ಲಿ ಭಾಗಿಯಾಗಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಎಸ್‌.ಕೆ.ಉಮೇಶ್‌ ಅವರು ಮಾರ್ಗಸೂಚಿ ಪಾಲನೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.