ಫೋನ್–ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆ ಹಾಗೂ ಡಾ.ಬಿ.ಕೆ.ವಿಜಯೇಂದ್ರ ಅವರು ನೀಡಿದ ಉತ್ತರಗಳು ಹೀಗಿವೆ.
ಎ.ಬಿ.ಶಿವಕುಮಾರ್, ಯಲಹಂಕ
* ಗಣೇಶ ವಿಸರ್ಜನೆಗೆ ಪಾಲಿಕೆ ಏನು ಕ್ರಮಗಳನ್ನು ಕೈಗೊಂಡಿದೆ?
ಗಣೇಶ ಚತುರ್ಥಿಯಂದು ಹಾಗೂ ತದನಂತರ 3ನೇ ಹಾಗೂ 5ನೇ ದಿನ ಪ್ರತಿ ವಾರ್ಡ್‌ಗಳಲ್ಲಿ 3ರಿಂದ 4ರಷ್ಟು ಸಂಚಾರ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಿದ್ದೇವೆ. ಮನೆಗಳಲ್ಲಿ ಪೂಜಿಸಿದ ಗಣೇಶ ವಿಗ್ರಹಗಳನ್ನು ಅದರಲ್ಲೇ ವಿಸರ್ಜಿಸಬಹುದು. ಕೆರೆಗಳಲ್ಲಿ ನೇರವಾಗಿ ಮೂರ್ತಿ ವಿಸರ್ಜನೆ ಮಾಡಿದರೆ ಮಾಲಿನ್ಯ ಉಂಟಾಗುವ ಅಪಾಯ ಇದೆ. ಇದನ್ನು ತಪ್ಪಿಸಲು ಕೆರೆ ಪಕ್ಕದಲ್ಲಿ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ.
ಜಯತೀರ್ಥ, ಬಿಟಿಎಂ ಲೇಔಟ್
* ನಮ್ಮ ಮನೆ ಸಮೀಪದ ಎರಡು ಮನೆಗಳು ಖಾಲಿ ಇವೆ. ಪಕ್ಕದಲ್ಲಿಎರಡು ಖಾಲಿ ನಿವೇಶನಗಳಿವೆ. ಅಲ್ಲೆಲ್ಲ ಕಸ ರಾಶಿಯೇ ಇರುತ್ತದೆ. ಹೋಟೆಲ್‌ಗಳಲ್ಲಿ ಬಳಸುವ ಕಪ್‌ಗಳನ್ನೂ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ ?
ಖಾಲಿ ನಿವೇಶನದಲ್ಲಿ ಕಸ ಬಿದ್ದರೆ ಅದಕ್ಕೆ ಮಾಲೀಕರೇ ಹೊಣೆ. ಅವರು ಅದನ್ನು ಸ್ವಚ್ಛ ಮಾಡದಿದ್ದರೆ ಪಾಲಿಕೆಯ ವತಿಯಿಂದ ಸ್ದಚ್ಛಗೊಳಿಸಿ ಅದರ ವೆಚ್ಚವನ್ನೂ ಅವರಿಂದಲೇ ವಸೂಲಿ ಮಾಡುತ್ತೇವೆ. ನಿಮ್ಮ ದೂರಿನ ಬಗ್ಗೆ ವಾರದೊಳಗೆ ಕ್ರಮಕೈಗೊಳ್ಳುತ್ತೇವೆ.
ಶಿವಮೂರ್ತಿ, ಜಕ್ಕೂರು
* ಮಳೆ ಬಂದಾಗ ತುಂಬಾ ಸೊಳ್ಳೆ ಉತ್ಪತ್ತಿಯಾಗುತ್ತದೆ. ಪಾಲಿಕೆಯ ಕಸ ಸಾಗಿಸುವ ವಾಹನ ನಮ್ಮ ಮನೆ ಬಳಿಗೆ ಬರುವುದುನಾವು ಕೆಲಸಕ್ಕೆ ಹೋದ ಬಳಿಕವೇ. ನಮ್ಮಂಥವರು ಕಸ ವಿಲೇವಾರಿ ಮಾಡುವುದಕ್ಕೆ ಪರಿಹಾರ ಸೂಚಿಸಿ.
ಬೆಳಿಗ್ಗೆ 7 ರಿಂದ 10 ಗಂಟೆಯೊಳಗೆಯೇ ಕಸ ಸಂಗ್ರಹಿಸಬೇಕು ಎಂಬ ನಿಯಮವಿದೆ. ಕಸ ವಿಲೇವಾರಿಯ ಹೊಸ ಟೆಂಡರ್ ಜಾರಿಯಾದ ಬಳಿಕ ಕಸ ಸಾಗಿಸುವ ಆಟೊ ಟಿಪ್ಪರ್‌ಗೆ ಜಿಪಿಎಸ್ ಅಳವಡಿಕೆ ಕಡ್ಡಾಯ. ವಾಹನಗಳು ಎಲ್ಲಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡುವುದಕ್ಕೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸುತ್ತಿದ್ದೇವೆ. ಇದರಿಂದ ಇಂತಹ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಇದೆ.
ನಿರ್ಮಲಾ, ಚಿಕ್ಕಬಾಣಾವರ
* ಚಿಕ್ಕಬಾಣಾವರ ಕೆರೆ ಮಲಿನವಾಗಿದೆ. ಕೆರೆಯ ತೂಬು ಮುಚ್ಚಿದ್ದರಿಂದ ಸೊಳ್ಳೆ ಉತ್ಪತ್ತಿ ಅಧಿಕವಾಗಿದೆ.
ಸೊಳ್ಳೆ ನಿಯಂತ್ರಣಕ್ಕೆ ಕೆರೆಗೆ ಗ್ಯಾಂಬೂಸಿಯಾ ಹಾಗೂ ಗಪ್ಪಿ ಮೀನು ಬಿಡಬಹುದು. ರಾಸಾಯನಿಕ ಸೇರಿ ನೀರು ಮಲಿನವಾಗಿದ್ದರೆ ಮೀನು ಬದುಕಲಿಕ್ಕಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ಇದನ್ನೂ ಓದಿ...‘ವಾಸಸ್ಥಳ ಸ್ವಚ್ಛವಿದ್ದರೆ ಡೆಂಗಿ ದೂರ’
ರವಿ, ಕೆ.ಆರ್.ಪುರ
* ಪ್ಲಾಸ್ಟಿಕ್ ಚೀಲ ಬಳಕೆ ನಿಷೇಧಿಸಿದ್ದರೂ ಕೆ.ಆರ್.ಪುರ, ರಾಮಮೂರ್ತಿನಗರ ಪ್ರದೇಶಗಳಲ್ಲಿ ಇವುಗಳ ಬಳಕೆ ನಿಂತಿಲ್ಲ. ಇದನ್ನು ಹೇಗೆ ತಡೆಯುವಿರಿ ?
ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವವರೆಗೆ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ.ಇನ್ನೆರಡು ದಿನ ಕಾಯಿರಿ, ನಿಮಗೇ ಎಲ್ಲವೂ ತಿಳಿಯಲಿದೆ.
ಪ್ರಧಾನ್, ಬಿಳೇಕಹಳ್ಳಿ
* ವಿಜಯ ಬ್ಯಾಂಕ್ ಕಾಲೊನಿಯ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಮಳೆ ನೀರು ಚರಂಡಿಗೆ ಒಳಚರಂಡಿ ನೀರೂ ಸೇರಿಕೊಂಡು ಇಡೀ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
ಮಳೆ ನೀರಿನ ಚರಂಡಿಗೆ ಒಳಚರಂಡಿ ನೀರು ಸೇರಲೇಬಾರದು. ಅದನ್ನು ತಕ್ಷಣ ತಡೆಯಬೇಕು. ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ತರುತ್ತೇನೆ.
ಜ್ಯೋತಿ, ವಿಜಯನಗರ
* ಎಂ.ಸಿ. ಲೇಔಟ್ ಪ್ರದೇಶದಲ್ಲಿ ಎರಡು ಶಾಲೆಗಳಿದ್ದು, ತುಂಬ ಸೊಳ್ಳೆ ಕಾಟ ಇದೆ. ಪರಿಹರಿಸಿ.
ಸ್ಥಳೀಯ ವೈದ್ಯಾಧಿಕಾರಿಯನ್ನು ಅಥವಾ ಆರೋಗ್ಯ ನಿರೀಕ್ಷಕರನ್ನು ಶಾಲೆಗೆ ಕಳುಹಿಸುತ್ತೇನೆ. ಸೊಳ್ಳೆ ನಿಯಂತ್ರಣಕ್ಕೆ ಅವರು ಪರಿಹಾರ ಕ್ರಮಗಳನ್ನು ಸೂಚಿಸಲಿದ್ದಾರೆ.
ವೆಂಕಟಾಚಲಪತಿ, ಯಲಹಂಕ
* ಯಲಹಂಕ ಬಳಿ ಖಾಲಿ ನಿವೇಶನಗಳಲ್ಲಿ ಕಸ ರಾಶಿ ಹಾಕುತ್ತಾರೆ.
ಪ್ರತಿ ವಾರ್ಡ್‌ಗೆ ನಿವೃತ್ತ ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಿಸಲಾಗುವುದು. ಬೇಕಾಬಿಟ್ಟಿ ಕಸ ಎಸೆಯುವವರಿಗೆ ಅವರು ದಂಡ ವಿಧಿಸಲಿದ್ದಾರೆ.
ಚೌಹಾಣ್, ಅವೆನ್ಯೂ ರಸ್ತೆ
* ವ್ಯಾಪಾರ ಪರವಾನಗಿ ನವೀಕರಣಕ್ಕೆ ಫೆಬ್ರುವರಿಯಲ್ಲೇ ಆನ್‌ಲೈನ್‌ನಲ್ಲಿ ಹಣ ಪಾವತಿಸಿದರೂ, ಪ್ರಮಾಣಪತ್ರ ಇನ್ನೂ ಡೌನ್‌ಲೋಡ್
ಆಗುತ್ತಿಲ್ಲ. ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಬಂದು ಕಿರುಕುಳ ಕೊಡುತ್ತಿದ್ದಾರೆ, ಹಣ ಕೀಳುತ್ತಿದ್ದಾರೆ. ದಯವಿಟ್ಟು ಪರಿಹರಿಸಿ.
ನೀವು ಕಟ್ಟಿದ ಶುಲ್ಕದ ರಸೀದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ನು ಮುಂದೆ ನಿಮಗೆ ಮಾತ್ರವಲ್ಲ ಇತರರಿಗೂ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳುತ್ತೇನೆ. ಕೆನರಾ ಬ್ಯಾಂಕ್‌ಗೆ ಸಂಪರ್ಕಿಸಿದ್ದಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಸಮಸ್ಯೆ ಆಗಿರಬಹುದು. ಇದರ ಬಗ್ಗೆ ಪರಿಶೀಲಿಸಲಾಗುವುದು.
ಮೋಹನದಾಸ ಶೆಟ್ಟಿ, ಬನಶಂಕರಿ
* ಕಾರ್ಖಾನೆಗಳಿಂದಪ್ಯಾಕ್ ಆಗಿ ಬರುವ ಪೊಟ್ಟಣಗಳಿಗೂ ಪ್ಲಾಸ್ಟಿಕ್ ನಿಷೇಧ ಅನ್ವಯವಾಗುತ್ತದೆಯೇ?
ಸದ್ಯಕ್ಕೆ ಸಾಮಗ್ರಿಗಳನ್ನು ಕಾರ್ಖಾನೆಯಲ್ಲೇ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ಗೆ ನಿಷೇಧ ಹೇರಿಲ್ಲ. ಅದಕ್ಕೆ ಪರ್ಯಾಯ ವ್ಯವಸ್ಥೆ ಆದ ನಂತರ ಕ್ರಮೇಣ ಈ ಪ್ಲಾಸ್ಟಿಕ್‌ಗಳೂ ನಿಷೇಧಗೊಳ್ಳಬಹುದು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಬಳಸುವ ಪ್ಲಾಸ್ಟಿಕ್‌ಗಳನ್ನು,ಇತರ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಬಳಸುವವರಿಗೂ ದಂಡ ವಿಧಿಸುವ ಅವಕಾಶ ಇದ್ದು, ಇದನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದೇವೆ.
ಸುಧಾಕರ ಶೆಟ್ಟಿ, ಕಲ್ಕೆರೆ ಹೊರಮಾವು
* 10 ದಿನದಿಂದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸೊಳ್ಳೆ ಉತ್ಪಾದನೆಗೆ ಕಾರಣವಾಗುತ್ತಿದೆ. ಸರಿಪಡಿಸಿ
ಸಂಬಂಧಪಟ್ಟ ಎಂಜಿನಿಯರ್ ಗಮನಕ್ಕೆ ತರುತ್ತೇನೆ.
ಹರಿ, ರಾಜಾಜಿನಗರ
* ರಾಜಾಜಿನಗರ ಮೂರನೇ ಬ್ಲಾಕ್‌ನಲ್ಲಿ ಒಳಚರಂಡಿ ನೀರು ರಸ್ತಯಲ್ಲೇ ಹರಿಯುತ್ತಿದೆ. ಸರಿಪಡಿಸಿ.
ತಕ್ಷಣ ಆರೋಗ್ಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು.
ಸೋಮಶೇಖರ್,ಗೋಪಾಲಪುರ
*ಬಿಸ್ಕತ್ ಪೊಟ್ಟಣವೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆಯೇ?
ಬಿಸ್ಕತ್‌ನಂತಹ ತಿನಿಸು ಪ್ಯಾಕ್ ಮಾಡುವ ಪೊಟ್ಟಣವನ್ನು ಪೂರ್ತಿ ಹರಿದು ಹಾಕಿದರೆ ಸಮಸ್ಯೆ ಇಲ್ಲ. ನೀರು ನಿಲ್ಲುವಂತಹ ಆಕಾರದಲ್ಲಿದ್ದರೆ ಅದು ಸೊಳ್ಳೆ ಉತ್ಪತ್ತಿಗೆ ಕಾರಣವಾಗಲೂಬಹುದು.
ಅರವಿಂದ,ಯಲಹಂಕ
*ಹೋಟೆಲ್ ತ್ಯಾಜ್ಯ, ಮನೆಯ ಕಸ ವಿಲೇವಾರಿ ಆಗುತ್ತಿಲ್ಲ. ಸೊಳ್ಳೆ ಕಾಟವೂ ಇದೆ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನ ಆಗಿಲ್ಲ.
ಹೋಟೆಲ್ ತ್ಯಾಜ್ಯ, ಕಸ ವಿಲೇವಾರಿಗೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ. ವೈದ್ಯಾಧಿಕಾರಿ ಜತೆಗೆ ಮಾತನಾಡಿ, ಅವರನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುತ್ತೇನೆ.
ಸೌಭಾಗ್ಯ,ಮಲ್ಲೇಶ್ವರ
*ಒಳಚರಂಡಿ ನೀರು ಕಟ್ಟಿಕೊಂಡು ಕೊಳದಂತಾಗಿದೆ. ಇದರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಅನೇಕ ವರ್ಷಗಳಿಂದ ಈ ಸಮಸ್ಯೆ ಇದೆ
ನಾನೇ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸಮಸ್ಯೆ ಬಗೆಹರಿಸಲು ನನ್ನಿಂದಾದ ಪ್ರಯತ್ನ ಮಾಡುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.