ADVERTISEMENT

ಭೌತ ವಿಜ್ಞಾನಿ ರೋಹಿಣಿ ಗೋಡ್‌ಬೋಲೆ ನಿಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:43 IST
Last Updated 25 ಅಕ್ಟೋಬರ್ 2024, 15:43 IST
ರೋಹಿಣಿ ಗೋಡ್‌ಬೋಲೆ
ರೋಹಿಣಿ ಗೋಡ್‌ಬೋಲೆ   

ಬೆಂಗಳೂರು: ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತ ಭೌತ ವಿಜ್ಞಾನಿ ರೋಹಿಣಿ ಗೋಡ್‌ಬೋಲೆ (72) ಅವರು ಪುಣೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 

ಒಂದು ವರ್ಷದಿಂದ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಕೆಲ ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು, ಎರಡು ತಿಂಗಳಿಂದ ಪುಣೆಯಲ್ಲಿ ವಾಸವಿದ್ದರು. 

ಪುಣೆಯಲ್ಲಿ 1952ರಲ್ಲಿ ಜನಿಸಿದ ಅವರು, ಪುಣೆ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದಲ್ಲಿ ಬಿ.ಎಸ್‌ಸಿ ಪದವಿ, ಐಐಟಿ ಬಾಂಬೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಹೈ ಎನರ್ಜಿ ಫಿಸಿಕ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. 

ADVERTISEMENT

ಪ್ರಾಧ್ಯಾಪಕ ವೃತ್ತಿಯ ಜತೆಗೆ ಸಂಶೋಧನಾ ಅಧ್ಯಯನವನ್ನು ಕೈಗೊಂಡಿದ್ದ ಅವರು, ಕಣ ಭೌತವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ‘ಮಹಿಳೆ ಮತ್ತು ವಿಜ್ಞಾನ’ ಕ್ಷೇತ್ರದಲ್ಲಿಯೂ ದೊಡ್ಡ ಸಾಧನೆ ಮಾಡಿದ್ದರು. ಪುಸ್ತಕಗಳ ಜತೆಗೆ 280ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದರು. 

ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ 2019ರಲ್ಲಿ ಅವರಿಗೆ ‘ಪದ್ಮಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಫ್ರಾನ್ಸ್‌ನ ‘ಆರ್ಡೆ ನ್ಯಾಷನಲ್ ಡ್ಯು ಮೆರಿಟ್’ ಅತ್ಯುನ್ನತ ನಾಗರಿಕ ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.