ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಾಸಿಗೆ ಸಿಗುವುದಿರಲಿ, ಮಾತ್ರೆಗಳಿಗೂ ಪಡಿಪಾಟಲು ಎದುರಿಸುವ ದುಃಸ್ಥಿತಿ ಎದುರಾಗಿದೆ.
‘ಕೋವಿಡ್ ದೃಢಪಟ್ಟವರು ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಒಳಗಾಗುವಂತೆ ಬಿಬಿಎಂಪಿಯವರು ದೂರವಾಣಿ ಮೂಲಕವೇ ತಿಳಿಸುತ್ತಾರೆ. ಯಾವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬ ಸಲಹೆಯನ್ನು ವೈದ್ಯರು ದೂರವಾಣಿ ಮೂಲಕವೇ ನೀಡುತ್ತಿದ್ದಾರೆ. ಸಮೀಪದ ಆರೋಗ್ಯ ಕೇಂದ್ರದಿಂದ ಮಾತ್ರೆ ವಿತರಣೆ ಕಾರ್ಯವನ್ನೂ ಮಾಡುತ್ತಿಲ್ಲ’ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಹೇಳುತ್ತಾರೆ.
‘ಕೋವಿಡ್ ದೃಢಪಟ್ಟ ಬಳಿಕ ಆತಂಕಗೊಂಡು ರೋಗಿಗಳು ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರೆ ಖರೀದಿಸಬೇಕಾದ ದುಸ್ಥಿತಿ ಬಂದಿದೆ. ಕೋವಿಡ್‌ಗೆ ನೀಡಲಾಗುವ ರೆಮ್‌ಡಿಸಿವಿರ್ ಅನ್ನೂ ಸಿಬ್ಬಂದಿ ಮಾರಾಟ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಥಾರಕ್ಕೆ ದಿನಗಟ್ಟಲೆ ಕಾಯಬೇಕಾಗಿದೆ. ಅವಕಾಶ ಇದ್ದವರಿಗೆ ತಮ್ಮ ಖಾಸಗಿ ಜಮೀನಿನಲ್ಲೇ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ಮಂಜುನಾಥ್ ಹೇಳಿದರು.
ಕ್ಷೇತ್ರಕ್ಕೊಂದು ಆರೈಕೆ ಕೇಂದ್ರಕ್ಕೆ ಬೇಕು: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕು ಎಂದು ಆರ್. ಮಂಜುನಾಥ್ ಒತ್ತಾಯಿಸಿದರು.
‘ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಮೂಲಕ ಶೇ 50ರಷ್ಟು ಜನರಿಗೆ ಅವಕಾಶ ನೀಡಬೇಕು. 25 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಬೇಕು. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದರು.
ಬಿ.ಯು ನಂಬರ್ ಸಿಗದೆ ಪರದಾಟ
ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟವರಿಗೆ ನೀಡಲಾಗುವ ಬಿ.ಯು ನಂಬರ್ ನಾಲ್ಕು ದಿನ ಕಳೆದರೂ ಬಾರದ ಕಾರಣ ಗಂಭೀರ ಸ್ಥಿತಿಯಲ್ಲಿದ್ದವರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.
‘ಸೋಂಕಿನ ಲಕ್ಷಣ ಇದ್ದ ಕಾರಣ ನಮ್ಮ ವಾರ್ಡ್‌ನ ವ್ಯಕ್ತಿಯೊಬ್ಬರು ಏ.15ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದರು. ನಾಲ್ಕು ದಿನಗಳು ಕಳೆದರೂ ಬಿ.ಯು ನಂಬರ್ ಬಂದಿಲ್ಲ. ಪ್ರಯೋಗಾಲಯಗಳಲ್ಲಿ ಮಾಡುವ ತಪ್ಪಿನಿಂದ ಈ ನಂಬರ್‌ಗಳು ಬರುತ್ತಿಲ್ಲ. ನಂಬರ್ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲು ಬಿಬಿಎಂಪಿ ಮುಂದಾಗುವುದಿಲ್ಲ. ಪ್ರಯೋಗಾಲಯದವರು ಮಾಡುವ ತಪ್ಪಿಗೆ ಜನ ಬಲಿಯಾಗುತ್ತಿದ್ದಾರೆ’ ಎಂದು ಪಾಲಿಕೆಯ ಮಾಜಿ ಸದಸ್ಯ ಎಂ.ಶಿವರಾಜು ತಿಳಿಸಿದರು.
‘ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆಯ ಅಗತ್ಯವಿದೆ. ಬಿ.ಯು ನಂಬರ್ ಇಲ್ಲದ ಕಾರಣ ಮನೆಯಲ್ಲೇ ಇದ್ದಾರೆ. ಇನ್ನೂ ವಿಳಂಬವಾದರೆ ಅವರು ಬದುಕುಳಿಯುವುದೇ ಕಷ್ಟ’ ಎಂದರು.
ಕಣ್ಣೀರಿಟ್ಟ ಸ್ವಯಂಸೇವಕ
ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕ ಕೊರತೆಯಿಂದ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಯನ್ನು ದಿನವೂ ಕಣ್ಣಾರೆ ಕಾಣುತ್ತಿರುವ ಸ್ವಯಂಸೇವಕರೊಬ್ಬರು ಕಣ್ಣೀರಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ನ (ಇಆರ್‌ಟಿ) ಸದಸ್ಯ, ಕೋವಿಡ್ ಹೆಲ್ಪ್‌ಲೈನ್ ಡಾಟ್ ಕಾಮ್ ನಿರ್ವಹಿಸುತ್ತಿರುವ ಅಮೀನ್ ಮುದಸ್ಸಿರ್ ಎಂಬುವರು ಬೆಂಗಳೂರಿನಲ್ಲಿ ಕೋವಿಡ್ ಸ್ಥಿತಿ ಕಂಡು ದುಃಖಿತರಾಗಿ ವಿಡಿಯೊ ಮಾಡಿದ್ದಾರೆ.
ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆಗಳು ಸಿಗುತ್ತಿಲ್ಲ, ಐಸಿಯುನಲ್ಲಿ ಇದ್ದವರಿಗೆ ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ನಗರದ 60ಕ್ಕೂ ಹೆಚ್ಚು ಆಸ್ಪತ್ರೆಗಳ ಹೊರಗೆ ಸೋಂಕಿತರು ಕಾಯುತ್ತಿದ್ದಾರೆ. ಸೋಂಕಿತರ ಕುಟುಂಬದವರು ‘ನನ್ನ ತಾಯಿ, ಸ್ನೇಹಿತ, ಮಗ ಸಾವು–ಬದುಕಿನ ನಡುವೆ ಸೆಣಸುತ್ತಿದ್ದಾರೆ. ಯಾವುದಾದರೊಂದು ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಿ’ ಎಂದು ಅಕ್ಷರಶಃ ಭಿಕ್ಷೆ ಬೇಡಿದವರಂತೆ ಕೇಳಿಕೊಳ್ಳುತ್ತಾರೆ. ಯಾರಿಗೂ ಸಹಾಯ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಕಣ್ಣೀರಿಟ್ಟಿದ್ದಾರೆ.
‘ಬೆಂಗಳೂರಿನ ಜನ ದಯವಿಟ್ಟು ಹೊರಗೆ ಓಡಾಡುವುದನ್ನು ಆದಷ್ಟು ಕಡಿಮೆ ಮಾಡಿ. ಸುರಕ್ಷಿತ ಎನ್ನುವ ಯಾವ ಜಾಗವೂ ಇಲ್ಲ. ಮನೆಯಲ್ಲೇ ಇರಿ’ ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.