ಬೆಂಗಳೂರು: ನಗರದಲ್ಲಿ ಮಾರಲು ತಂದಿದ್ದ ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ಬ್ಯಾಟರಾಯನಪುರ ಪೊಲೀಸರು ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಮಹಾರಾಷ್ಟ್ರ ಸಾಂಗ್ಲಿಯ ರಾಹುಲ್ ಸತೀಶ್ ಮಾನೆ ಮತ್ತು ಕೊಲ್ಲಾಪುರದ ರಫಿಕ್ ದಸ್ತಗಿರ್ ನದಾಫ್ ಬಂಧಿತರು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಆರೋಪಿಗಳು ಓಡಾಡುತ್ತಿದ್ದರು. ಅವರ ಬಳಿ ಕಪ್ಪು ಬಣ್ಣದ ಬ್ಯಾಗ್ ಇತ್ತು. ಅವರ ನಡೆಯಿಂದ ಅನುಮಾನಗೊಂಡಿದ್ದ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ಬ್ಯಾಗ್‌ನಲ್ಲಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು ಪತ್ತೆಯಾದವು’ ಎಂದೂ ತಿಳಿಸಿವೆ.
‘ಹೊರ ರಾಜ್ಯಗಳಲ್ಲಿ ತಯಾರಿಸುತ್ತಿದ್ದ ಪಿಸ್ತೂಲ್‌ಗಳನ್ನು ಆರೋಪಿಗಳು ನಗರಕ್ಕೆ ತಂದು ಮಾರುತ್ತಿದ್ದರು. ಅಪರಾಧ ಹಿನ್ನೆಲೆಯುಳ್ಳ ಕೆಲವರು ಪಿಸ್ತೂಲ್ ಖರೀದಿ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.