ಬೆಂಗಳೂರು: ಕಾಟನ್‌ಪೇಟೆ ಠಾಣೆ ವ್ಯಾಪ್ತಿಯ ಬಿನ್ನಿಮಿಲ್ ಮೈದಾನ ಬಳಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾರತ್ತಹಳ್ಳಿಯ ರೋಹನ್ ಮಂಡಲ್ ಅಲಿಯಾಸ್ ಸುಬ್ರೋತೊ, ಸೈಯದ್ ರಿಜ್ವಾನ್ (39), ಹಾವೇರಿ ಜಿಲ್ಲೆಯ ಅಸ್ಲಾಂ ಗುತ್ತಲ್ (45), ಧರ್ಮಣ್ಣ ದೇವಲಪ್ಪ ಚೌಹಾಣ್, ಮೈಸೂರಿನ ಜಾವೀದ್ ಖಾನ್ ಹಾಗೂ ಹುಬ್ಬಳ್ಳಿಯ ರಾಯಣ್ಣಗೌಡ ಬಂಧಿತರು. ಅವರಿಂದ ಮೂರು ಪಿಸ್ತೂಲ್, ಒಂದು ರಿವಾಲ್ವರ್ ಹಾಗೂ 8ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.
‘ಪಶ್ಚಿಮ ಬಂಗಾಳದ ರೋಹನ್ ಮಂಡಲ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಅಕ್ರಮ ಶಸ್ತ್ರಾಸ್ತ್ರ ಮಾರಾಟದಲ್ಲಿ ತೊಡಗಿದ್ದ. ಆತನ ವಿರುದ್ಧ ಪಶ್ಚಿಮ ಬಂಗಾಳದಲ್ಲೇ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಇನ್ನೊಬ್ಬ ಆರೋಪಿ ಅಸ್ಲಾಂ ಗುತ್ತಲ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ. ಇವರಿಬ್ಬರು ಗ್ಯಾಂಗ್ ಕಟ್ಟಿಕೊಂಡು ದರೋಡೆ ನಡೆಸುತ್ತಿದ್ದರು. ಇತರೆ ಆರೋಪಿಗಳು ಅವರಿಗೆ ಸಹಾಯ ಮಾಡುತ್ತಿದ್ದರು.’
‘ಭಾರತಿನಗರ, ಡಿ.ಜೆ.ಹಳ್ಳಿ, ಬಂಟ್ವಾಳ, ಹಲಗೇರಿ, ಹಾಸನ, ಮೈಸೂರು, ಮಂಗಳೂರು ಹಾಗೂ ಮಂಡ್ಯ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಕೃತ್ಯ ಎಸಗಿದ್ದ ಮಾಹಿತಿ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.