ADVERTISEMENT

ಬೆಂಗಳೂರು| ಬಿಬಿಎಂಪಿ ದಕ್ಷಿಣ ವಲಯದಲ್ಲಿ ನಕ್ಷೆ ಉಲ್ಲಂಘನೆ: ಕಟ್ಟಡ ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 23:59 IST
Last Updated 19 ಜುಲೈ 2023, 23:59 IST
ಬಸವನಗುಡಿಯ ಗಿರಿನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿದ್ದ ಒಂದು ಅಂತಸ್ತನ್ನು ಬಿಬಿಎಂಪಿ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.
ಬಸವನಗುಡಿಯ ಗಿರಿನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿದ್ದ ಒಂದು ಅಂತಸ್ತನ್ನು ಬಿಬಿಎಂಪಿ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.   

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ಆರಂಭಗೊಂಡಿದೆ. 

ಬಸವನಗುಡಿಯ ಗಿರಿನಗರದಲ್ಲಿ ಒಂದು ಅಂತಸ್ತನ್ನೇ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗುತ್ತಿತ್ತು. ನಗರ ಯೋಜನೆ ಅಧಿಕಾರಿಗಳ ನೇತೃತ್ವದಲ್ಲಿ ಬಿಬಿಎಂಪಿ ಸಿಬ್ಬಂದಿ ಕಟ್ಟಡವನ್ನು ಬುಧವಾರ ತೆರವುಗೊಳಿಸಿದರು.

ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್‌, ಜಯನಗರ, ವಿಜಯನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 80 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿರುವುದು ಸಾಬೀತಾಗಿದೆ. 2018ರಿಂದ 2023ರವರೆಗೆ ನಕ್ಷೆ ಅನುಮೋದನೆಯಾಗಿರುವ ಕಟ್ಟಡಗಳೇ ಇದರಲ್ಲಿ ಹೆಚ್ಚಿವೆ. 

ADVERTISEMENT

2010, 2014, 2015ರಲ್ಲೂ ಮಂಜೂರಾದ ನಕ್ಷೆಗಳ ಕಟ್ಟಡಗಳಲ್ಲೂ ಉಲ್ಲಂಘನೆಯಾಗಿದ್ದು, ನ್ಯಾಯಾಲಯದ ತಡೆಯಾಜ್ಞೆಗಳಿದ್ದವು. ಅವುಗಳ ತಡೆಯಾಜ್ಞೆ ತೆರವಾಗಿದ್ದು, ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

‘ನಕ್ಷೆ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎನ್ನುವ ದೂರುಗಳು ಸಾರ್ವಜನಿಕರಿಂದ ಬಂದಿದ್ದವು. ಈ ದೂರುಗಳನ್ನು ಆಧರಿಸಿ ವಿಚಾರಣೆ ನಡೆಸಿರುವ ನಗರ ಯೋಜನಾ ಅಧಿಕಾರಿಗಳು, ಅಕ್ರಮವಾಗಿ ಕಟ್ಟಿರುವುದನ್ನು ದಾಖಲೆ ಸಹಿತ ಸಾಬೀತುಪಡಿಸಿದ್ದಾರೆ. ಇದಾದ ಮೇಲೆ,  ಸ್ಥಳಪರಿಶೀಲನೆ ನಡೆಸಲಾಗಿದ್ದು, ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ತೆರವಿಗೆ ಆದೇಶ ಹೊರಡಿಸಲಾಗಿದೆ. ಕಟ್ಟಡಗಳ ಮೇಲೆ ಎಷ್ಟು ಅಕ್ರಮ ಅಥವಾ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಕಳೆದ ವಾರ ಕೆಂಪು ಬಣ್ಣದಿಂದ ಬರೆಯಲಾಗಿತ್ತು.

ದಕ್ಷಿಣ ವಲಯದಲ್ಲಿ ಒಟ್ಟು 80 ಕಟ್ಟಡಗಳನ್ನು ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿದೆ. ಇವುಗಳ ಬಗ್ಗೆ ಪರಿಶೀಲನೆ ನಡೆಸಿ, ನೋಟಿಸ್‌ ನೀಡಿ, ತೆರವಿಗೆ ಆದೇಶ ನೀಡಲಾಗಿತ್ತು. ಈ ಹಿಂದೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅವೆಲ್ಲ ತೆರವಾಗಿದ್ದು, ತೆರವು ಕಾರ್ಯಾಚರಣೆ ಆರಂಭವಾಗಿದೆ ಎಂದು ದಕ್ಷಿಣ ವಲಯ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.

ಎಲ್ಲೆಲ್ಲಿ ಉಲ್ಲಂಘನೆ? ಪ್ರದೇಶ;ಆಸ್ತಿ ಸಂಖ್ಯೆ ಚಿಕ್ಕಪೇಟೆ;31 ಜಯನಗರ;18 ಬಸವನಗುಡಿ;16 ಪದ್ಮನಾಭನಗರ;9 ಬಿಟಿಎಂ ಲೇಔಟ್‌;5 ವಿಜಯನಗರ;1 ಒಟ್ಟು;80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.