ADVERTISEMENT

ನಗರದಲ್ಲಿ ಅರಣ್ಯ ಪೋಷಿಸುತ್ತ...

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 4:47 IST
Last Updated 22 ಜೂನ್ 2024, 4:47 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಬೆಂಗಳೂರಿನ ಜೆ.ಪಿ. ನಗರದಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಬರುವ ನಮ್ಮ ‘ರಾಯಲ್ ಪಾರ್ಕ್ ರೆಸಿಡೆನ್ಸಿ’ ಎಂಬ ಬಡಾವಣೆಯಲ್ಲಿ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪ್ರಯೋಗವು ಗಮನಸೆಳೆಯುತ್ತಿದೆ.

ಜಪಾನಿನ ಸಸ್ಯ ಶಾಸ್ತ್ರಜ್ಞ ಪ್ರೊ. ಅಕಿರಾ ಮಿಯಾವಾಕಿ ಅವರ ‘ಮಿಯಾವಾಕಿ ಮಾದರಿ ಕಿರು ಅರಣ್ಯ’ವು ನಗರ ವಲಯಗಳಲ್ಲಿ ಅತಿ ಹೆಚ್ಚಿನ ಸಾಂದ್ರತೆಯೊಂದಿಗೆ ಶೀಘ್ರವಾಗಿ, ಪ್ರಾದೇಶಿಕ ಸಸ್ಯಗಳನ್ನೇ ಬಳಸಿ ಅರಣ್ಯವನ್ನು ಬೆಳೆಸಲು ಸೂಕ್ತ ಎಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಈ ಮಿಯಾವಾಕಿ ಮಾದರಿಯ ಮೂಲಸತ್ವವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ರದೇಶಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ, ನಾಲ್ಕು ವರ್ಷಗಳಲ್ಲಿ ನಮ್ಮ ಬಡಾವಣೆಯಲ್ಲಿ ಮೂರು ಮಿಯಾವಾಕಿ ಮಾದರಿ ಕಿರು ಅರಣ್ಯಗಳನ್ನು ರೂಪಿಸಿ, ಸುಮಾರು 4000 ಸಸಿಗಳನ್ನು ನೆಟ್ಟು, ಬೆಳೆಸಿ, ಪೋಷಿಸುತ್ತಾ ಬಂದಿದ್ದೇವೆ. ಎಕರೆ ಜಾಗದಲ್ಲಿ, ಮಿಯಾವಾಕಿ ಮಾದರಿಯಲ್ಲಿ ಸೂಚಿಸಿದಂತೆ, ಮೂರು ನಾಲ್ಕು ಅಡಿ ಅಂತರಗಳಲ್ಲಿ ಬೆಳೆಸಿದ ಈ ಗಿಡಗಳಿಗೆ ನಮಗೆ ತಗುಲಿದ ವೆಚ್ಚ ಸಸಿಯೊಂದಕ್ಕೆ ₹400 ಕ್ಕಿಂತಲೂ ಕಡಿಮೆ. ಮತ್ತು ಬದುಕುಳಿಯುವ ಯಶಸ್ಸಿನ ಪ್ರಮಾಣ ಶೇಕಡ 98 ಕ್ಕಿಂತಲೂ ಹೆಚ್ಚು ಎಂಬುದು ಕಣ್ಣಿಗೇ ಕಾಣುವಂತಿದೆ.

ADVERTISEMENT

ಇದು ಬಡಾವಣೆಯ ನಿವಾಸಿಗಳೇ ಹಣ ಸಂಗ್ರಹಿಸಿ ನಿರ್ವಹಣೆ ಮಾಡಿದ ಯೋಜನೆಯಾಗಿರುವುದರಿಂದ ವೆಚ್ಚವನ್ನು ಸಾಕಷ್ಟು ತಗ್ಗಿಸಲು ಪ್ರತಿ ಗಿಡಕ್ಕೆ ಬೇಲಿಯ ಬದಲು ಪೂರ್ತಿ ಜಾಗಕ್ಕೆ ತಾತ್ಕಾಲಿಕ ಬೇಲಿಯ ವ್ಯವಸ್ಥೆ, ನಮ್ಮದೇ ಪಾರ್ಕ್‌ಗಳಲ್ಲಿದ್ದ ದರಗೆಲೆಗಳ ಮರು ಬಳಕೆ, ಬಡಾವಣೆಯ ನೀರು ಪೂರೈಕೆ ವ್ಯವಸ್ಥೆಯ ಮುಂದುವರಿಕೆ, ನಮ್ಮದೇ ಮೇಲುಸ್ತುವಾರಿ ಮತ್ತು ಸಾಧ್ಯವಾದ ಮಟ್ಟಿಗೆ ಬಡಾವಣೆಯ ಸ್ವಯಂ ಸೇವಕರ ಬಳಕೆ ಮಾಡಿರುವುದು ಸತ್ಯ.

ಬಿಬಿಎಂಪಿಯ ನಮ್ಮ ವಲಯದ ಆಯುಕ್ತರು ನಮ್ಮ ಪ್ರಯತ್ನವನ್ನು ಖುದ್ದಾಗಿ ಪರಿಶೀಲಿಸಿ, ಶ್ಲಾಘಿಸಿ, ನಮ್ಮ ಕ್ಷೇಮಾಭಿವೃದ್ಧಿ ಸಂಘಕ್ಕೆ ನಮ್ಮ ಬಡಾವಣೆಯಲ್ಲಿಯೇ ತ್ಯಾಜ್ಯ ವಸ್ತುಗಳ ಕೊಂಪೆಯಾಗುತ್ತಿದ್ದ ಸುಮಾರು ಅರ್ಧ ಎಕರೆ ಜಾಗದಲ್ಲಿ ನಾಲ್ಕನೆಯ ಮಿಯಾವಾಕಿ ಕಿರು ಅರಣ್ಯವನ್ನು ನಿರ್ಮಾಣಕ್ಕೆ ಅನುಮತಿಸಿರುವುದು. ಬಿಬಿಎಂಪಿಯ ಶಾಶ್ವತ ವ್ಯವಸ್ಠೆಗೆ ಕಾಯದೇ ಮಳೆ ಮುಗಿಯುವ ಮುನ್ನ ನಮ್ಮದೇ ಹಣ ಸಂಗ್ರಹಣೆ ಮತ್ತು ನಿರ್ವಹಣೆಯೊಂದಿಗೆ ನಾವು ನಮ್ಮ ಹೆಮ್ಮೆಯ ನಾಲ್ಕನೇ ಮಿಯವಾಕಿ ಕಿರು ಅರಣ್ಯವನ್ನು ನಿರ್ಮಿಸುವ ತಯಾರಿಯಲ್ಲಿದ್ದೇವೆ. ಜೂನ್ 23 ಭಾನುವಾರ 2000 ಗಿಡಗಳೊಂದಿಗೆ ನಾಲ್ಕನೇ ಕಿರು ಅರಣ್ಯವನ್ನು ಲೋಕಾರ್ಪಣೆ ಮಾಡಲಾಗುವುದು. ಬಿಬಿಎಂಪಿಯ ವಲಯ ಅಧಿಕಾರ ರಮ್ಯಾ. ಎಸ್‌ ಸಸಿನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಎಲ್ಲ ಪರಿಸರಾಸಕ್ತರು ಪಾಲ್ಗೊಳ್ಳಬಹುದು. ಈ ಕಾರ್ಯಕ್ರಮವು ಭಾನುವಾರ ಬೆಳಗ್ಗೆ 9.30ಗೆ ಜರುಗಲಿದೆ ಎಂದು ಚಂದ್ರಶೇಖರ್‌ ಕಾಕಾಲ್‌ ತಿಳಿಸಿದ್ದಾರೆ.

ಸ್ಥಳ: ರಾಯಲ್‌ ಪಾರ್ಕ್ ರೆಸಿಡೆನ್ಸಿ ಲೇ ಔಟ್‌, ಆಂಜನಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.