ಬೆಂಗಳೂರು: ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಿಂದ ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲುಕೇಂದ್ರ ಸರ್ಕಾರ ಮುಂದಾಗುತ್ತಿರುವ ಸುದ್ದಿ ಎಲ್ಲೆಡೆ ಹರಡಿದೆ. ಅದು ಜಾರಿಗೆ ಬರುವ ಮುನ್ನವೇ, ಬಳಸಿ ಬಿಸಾಕಿದ್ದ ಪ್ಲಾಸ್ಟಿಕ್ ಖರೀದಿಸುವುದನ್ನು ನಗರದ ಬಹುತೇಕ ಗುಜರಿ ಅಂಗಡಿಗಳು ಸ್ಥಗಿತಗೊಳಿಸಿವೆ.
ನಗರದಲ್ಲಿ ನಿತ್ಯವೂ ಬಿಬಿಎಂಪಿ ವಾಹನಗಳು, ಟನ್‌ಗಟ್ಟಲೇ ಒಣಕಸವನ್ನು ಸಂಗ್ರಹಿಸುತ್ತಿವೆ. ಆ ಕಸವನ್ನು ಬೇರ್ಪಡಿಸಲು ವಾರ್ಡಿಗೊಂದು ಕೇಂದ್ರಗಳನ್ನು ತೆರೆಯಲಾಗಿದೆ. ಅಂಥ ಕೇಂದ್ರಗಳಲ್ಲೀಗ, ವಿಲೇವಾರಿಯಾಗದ ಪ್ಲಾಸ್ಟಿಕ್ ಮೂಟೆಗಳೇ ಕಾಣಸಿಗುತ್ತಿವೆ.
ರಾಜರಾಜೇಶ್ವರಿನಗರ ದಲ್ಲೂ ಒಣಕಸ ವಿಂಗಡಣಾ ಕೇಂದ್ರವಿದ್ದು, ಅದರ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಲಾಗಿದೆ. ಆ ಕೇಂದ್ರದಲ್ಲೂ, ಮೂಟೆಗಳಲ್ಲಿ ಪ್ಲಾಸ್ಟಿಕ್ ತುಂಬಿಸಿ ಇಡಲಾಗಿದೆ. ಬೇಡಿಕೆ ಇಲ್ಲದಿದ್ದರಿಂದ, ಆ ಮೂಟೆಗಳು ಜಾಗ ಬಿಟ್ಟು ಕದಲಿಲ್ಲ.
‘ತಿನಿಸು ಹಾಗೂ ಹಾಲಿನ ಪೊಟ್ಟಣ, ನೀರಿನ ಬಾಟಲಿ, ಬಕೆಟ್ ಸೇರಿದಂತೆ ಹಲವು ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುತ್ತಿದ್ದಾರೆ. ಇದರಿಂದಾಗಿ ಗುಜರಿ ಅಂಗಡಿಯವರಲ್ಲಿ ಆತಂಕ ಶುರುವಾಗಿದ್ದು, ‘ಪ್ಲಾಸ್ಟಿಕ್ ಬೇಡವೇ ಬೇಡ’ ಎಂದು ಹೇಳುತ್ತಿದ್ದಾರೆ. ಅದರ ಪರಿಣಾಮ ನಮ್ಮ ಮೇಲೆ ಆಗಿದೆ’ ಎಂದು ರಾಜರಾಜೇಶ್ವರಿ ನಗರ ಕೇಂದ್ರದ ಉಸ್ತುವಾರಿ ನೋಡಿ ಕೊಳ್ಳುವ ಅಲ್ಲಾಭಕ್ಷ ಹೇಳುತ್ತಾರೆ.
‘ಬಿಬಿಎಂಪಿ ಸಿಬ್ಬಂದಿಯೇ ಸಾರ್ವಜನಿಕರಿಂದ ಒಣಕಸವನ್ನು ಸಂಗ್ರಹಿಸಿ ನಮ್ಮ ಕೇಂದ್ರಕ್ಕೆ ತಂದುಕೊಟ್ಟು ಹೋಗುತ್ತಾರೆ. ಆ ಕಸದಲ್ಲಿರುವ ಪ್ಲಾಸ್ಟಿಕ್, ರಟ್ಟು ಹಾಗೂ ಬೇರೆ ಬೇರೆ ಉತ್ಪನ್ನಗಳನ್ನು ಬೇರ್ಪಡಿಸುತ್ತೇವೆ. ನಂತರ, ಪರಿಚಯಸ್ಥ ಗುಜರಿಕಂಪನಿಗಳಿಗೆ ಮಾರಾಟ ಮಾಡುತ್ತೇವೆ. ಅವರು ಪ್ಲಾಸ್ಟಿಕ್ ಸಂಸ್ಕರಣೆ ಮಾಡಿ ಮರು ಬಳಕೆ ಮಾಡುತ್ತಾರೆ’ ಎಂದು ಅವರು ವಿವರಿಸುತ್ತಾರೆ.
‘ಈಗ ಕಂಪನಿಯವರು ಪ್ಲಾಸ್ಟಿಕ್ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಖರೀದಿಸಿದ ಪ್ಲಾಸ್ಟಿಕ್‌ಗೂ ಹಣ ನೀಡಲು ಸತಾಯಿಸುತ್ತಿದ್ದಾರೆ. ನಗರದ ಎಲ್ಲ ಕೇಂದ್ರಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ. ಎಷ್ಟು ದಿನ ಆಗುತ್ತೋ ಅಷ್ಟು ದಿನ ನೋಡೋಣವೆಂದು ಸುಮ್ಮನಾಗಿದ್ದೇವೆ’ ಎಂದು ಅಲ್ಲಾಭಕ್ಷ ತಿಳಿಸುತ್ತಾರೆ.
ಪರ್ಯಾಯ ಕೆಲಸಕ್ಕೆ ಹುಡುಕಾಟ: ಒಣಕಸ ವಿಂಗಡಣೆ ಮಾಡಲು 5ರಿಂದ 10 ಕಾರ್ಮಿಕರು ಬೇಕು. ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಬೇಡಿಕೆ ಕಡಿಮೆ ಆಗುತ್ತಿದ್ದು, ಕಾರ್ಮಿಕರೆಲ್ಲರೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬಹುತೇಕರು, ಪರ್ಯಾಯ ಕೆಲಸಕ್ಕಾಗಿ ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರೆ.
‘ಬಿಬಿಎಂಪಿ ಸಿಬ್ಬಂದಿ, ತಾವು ತಂದ ಕಸವನ್ನು ತೂಕ ಮಾಡಿ ರಾಶಿ ಹಾಕಿ ಹೋಗುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೂ ಆ ರಾಶಿಯನ್ನು ಹೆಕ್ಕಿಸ ಬೇರ್ಪಡಿಸುವ ಕೆಲಸವನ್ನು ಕಾರ್ಮಿಕರೆಲ್ಲರೂ ಮಾಡುತ್ತೇವೆ. ಇದು ನಮ್ಮನಿತ್ಯದ ಕೆಲಸ. ಮುಂದಿನ ತಿಂಗಳಿನಿಂದ ಕೆಲಸವೇ ಇರುವುದಿಲ್ಲವೆಂದು ಹೇಳುತ್ತಿ
ದ್ದಾರೆ. ನಂತರ, ಏನು ಮಾಡುವುದು ಎಂಬುದು ತಿಳಿಯುತ್ತಿಲ್ಲ’ ಎಂದು ಕಾರ್ಮಿಕ ತಾಜ್ ಹೇಳುತ್ತಾರೆ.
‘ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತದೆ. ಅದರಲ್ಲೂ ಪ್ಲಾಸ್ಟಿಕ್ ಜಾಸ್ತಿ ಇರುತ್ತದೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಪ್ಲಾಸ್ಟಿಕ್ ನಿಷೇಧ ಮಾಡಿರುವುದನ್ನೂ ಸ್ವಾಗತಿಸುತ್ತೇವೆ. ನಿಷೇಧಕ್ಕೂ ಮುನ್ನ, ನಮಗೆ ಪರ್ಯಾಯ ಉದ್ಯೋಗ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.