ADVERTISEMENT

ಕೃಷಿ ಮೇಳ: ಜೇನು ಪೆಟ್ಟಿಗೆಗಳಲ್ಲಿ ಪ್ಲಾಸ್ಟಿಕ್‌ ಫ್ರೇಮ್‌

ಕಡಿಮೆ ಅವಧಿಯಲ್ಲಿ ತುಪ್ಪ ಸಂಗ್ರಹಕ್ಕೆ ಸಹಕಾರಿ

ಯಲಹಂಕ ಡಿ.ಸುರೇಶ್‌
Published 17 ನವೆಂಬರ್ 2024, 23:07 IST
Last Updated 17 ನವೆಂಬರ್ 2024, 23:07 IST
ಜೇನು ಕೃಷಿ ವಿಭಾಗದ ವಿಜ್ಞಾನಿ ಕೆ.ಟಿ.ವಿಜಯಕುಮಾರ್‌ ಅವರು ಜೇನುಪೆಟ್ಟಿಗೆಯಲ್ಲಿ ಪ್ಲಾಸ್ಟಿಕ್‌ ಫ್ರೇಮ್‌ಗಳ ಬಳಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು
ಜೇನು ಕೃಷಿ ವಿಭಾಗದ ವಿಜ್ಞಾನಿ ಕೆ.ಟಿ.ವಿಜಯಕುಮಾರ್‌ ಅವರು ಜೇನುಪೆಟ್ಟಿಗೆಯಲ್ಲಿ ಪ್ಲಾಸ್ಟಿಕ್‌ ಫ್ರೇಮ್‌ಗಳ ಬಳಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು   

ಯಲಹಂಕ: ಜೇನು ಪೆಟ್ಟಿಗೆಗಳಲ್ಲಿ ಮರದ ಫ್ರೇಮ್‌ಗಳ(ಚೌಕಟ್ಟುಗಳ) ಬದಲಿಗೆ ಪ್ಲಾಸ್ಟಿಕ್‌ ಫ್ರೇಮ್‌ಗಳನ್ನು ಉಪಯೋಗಿಸುವುದರಿಂದ ಕಡಿಮೆ ಸಮಯದಲ್ಲಿ ಜೇನು ತುಪ್ಪವನ್ನು ಸಂಗ್ರಹಿಸಬಹುದು.

ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ಜೇನು ಕೃಷಿ ವಿಭಾಗದ ‘ಮಧುವನ’ ತಾಕಿಗೆ ಭೇಟಿ ನೀಡಿದ್ದ ರೈತರಿಗೆ, ವಿಜ್ಞಾನಿಗಳು ಹೊಸದಾಗಿ ಪರಿಚಯಿಸಿರುವ ಜೇನು ಕೃಷಿ ವಿಧಾನದ ಕುರಿತು ಹೀಗೆ ವಿವರಣೆ ನೀಡಿದರು. ಈ ಬಾರಿಯ ಕೃಷಿ ಮೇಳದಲ್ಲಿ ರೈತರಿಗೆ ಜೇನುಕೃಷಿ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.

ಸಾಮಾನ್ಯವಾಗಿ ಜೇನು ಪೆಟ್ಟಿಗೆಗಳಲ್ಲಿ ಮರದ ಚೌಕಟ್ಟುಗಳನ್ನು ಉಪಯೋಗಿಸಲಾಗುತ್ತದೆ. ಇದರಿಂದ ಜೇನುತುಪ್ಪ ಸಂಗ್ರಹವಾಗಲು ಹೆಚ್ಚುಸಮಯ ತೆಗೆದುಕೊಳ್ಳುತ್ತದೆ. ಆದರೆ ಪ್ಲಾಸ್ಟಿಕ್‌ ಫ್ರೇಮ್‌ಗಳ ಬಳಕೆಯಿಂದ ತ್ವರಿತವಾಗಿ ಜೇನು ಸಂಗ್ರಹಣೆಯಾಗುವುದರ ಜೊತೆಗೆ ಮೇಣದ ಪತಂಗದ ಹಾವಳಿಯನ್ನೂ ನಿಯಂತ್ರಿಸಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ADVERTISEMENT

‘ಈ ನೂತನ ವಿಧಾನವನ್ನು ಬೆಂಗಳೂರಿನ ಎಂಜಿನಿಯರ್‌ ಆನಂದರಾವ್‌ ಅವರು ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನು ಕೃಷಿ ವಿಭಾಗ, ಇದನ್ನು ಪರೀಕ್ಷಿಸಿ, ಈ ಬಾರಿಯ ಕೃಷಿಮೇಳದಲ್ಲಿ ಬಿಡುಗಡೆ ಮಾಡಿದೆ’ ಎಂದು ಜೇನು ಕೃಷಿ ವಿಭಾಗದ ವಿಜ್ಞಾನಿ ಕೆ.ಟಿ.ವಿಜಯಕುಮಾರ್‌ ತಿಳಿಸಿದರು.

‘ಜಿಕೆವಿಕೆಯ ಮಧುವನದಲ್ಲಿ ಎರಡು ವರ್ಷ ಈ ವಿಧಾನವನ್ನು ಪರೀಕ್ಷಿಸಲಾಗಿದೆ. ಆಹಾರ ಶ್ರೇಣಿಯ ಗುಣಮಟ್ಟದ ಪ್ಲಾಸ್ಟಿಕ್‌ ಬಳಸಿ ಈ ಫ್ರೇಮ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ಲಾಸ್ಟಿಕ್‌ ಫ್ರೇಮ್‌ಗಳನ್ನು ದೀರ್ಘಕಾಲ ಬಳಸಬಹುದು. ಇದು ಜೇನು ಹುಳುಗಳಿಗೆ ಗೂಡುಕಟ್ಟುವ ಕೆಲಸದ ಅವಧಿಯನ್ನು ಕಡಿಮೆಮಾಡುತ್ತದೆ. ಮಾತ್ರವಲ್ಲ, ಸುಲಭವಾಗಿ ಜೇನು ಪೆಟ್ಟಿಗೆಗಳಿಗೆ ಅಳವಡಿಸಬಹುದಾಗಿದ್ದು, ಕೇವಲ ಜೇನುಸಂಗ್ರಹ ಭಾಗದಲ್ಲಿ ಮಾತ್ರ ಉಪಯೋಗಿಸಬಹುದಾಗಿದೆ. ಉಳಿದಂತೆ ಸಂಸಾರ ಕೋಣೆಯಲ್ಲಿ(ಬ್ರೂಡ್‌) ಸಾಮಾನ್ಯವಾದ ಮರದ ಚೌಕಟ್ಟುಗಳನ್ನು ಬಳಕೆ ಮಾಡಬಹುದು’ ಎಂದು ಅವರು ವಿವರಿಸಿದರು.

ಮರದ ಚೌಕಟ್ಟುಗಳಲ್ಲಿ ಜೇನು ತುಪ್ಪ ಸಂಗ್ರಹವಾಗಲು 25ರಿಂದ 28 ದಿನ ಬೇಕಾಗುತ್ತದೆ. ಪ್ಲಾಸ್ಟಿಕ್‌ ಫ್ರೇಮ್‌ ಬಳಕೆಯಿಂದ 10ರಿಂದ 12 ದಿನಗಳಲ್ಲಿ ಸಂಪೂರ್ಣವಾಗಿ ಜೇನುತುಪ್ಪ ಸಂಗ್ರಹವಾಗುತ್ತದೆ.

ಜೇನು ಕೃಷಿ ತರಬೇತಿ

ಜೇನುಕೃಷಿ ಕುರಿತು ತರಬೇತಿ ಮಾಹಿತಿ ಹಾಗೂ ಉಪಕರಣಗಳಿಗಾಗಿ ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗ-080-23636766 9986051852 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.