ADVERTISEMENT

1,110 ಕುಟುಂಬಗಳಿಗೆ ನಿವೇಶನ ಹಂಚಿಕೆ ವಿಳಂಬ

ಎಸ್‌ಸಿ, ಎಸ್‌ಟಿ, ಪೌರಕಾರ್ಮಿಕರಿಗೆ ನೀಡಿದ ಭರವಸೆ 16 ವರ್ಷದಿಂದ ಈಡೇರಿಲ್ಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 1:20 IST
Last Updated 7 ನವೆಂಬರ್ 2024, 1:20 IST
ಬಡಾವಣೆ ನಿರ್ಮಾಣಕ್ಕಾಗಿ ಬಿಬಿಎಂಪಿ ಸ್ವಾಧೀನಕ್ಕೆ ನೀಡಿರುವ ಲಕ್ಷ್ಮೀಪುರದಲ್ಲಿನ ಜಮೀನು
ಬಡಾವಣೆ ನಿರ್ಮಾಣಕ್ಕಾಗಿ ಬಿಬಿಎಂಪಿ ಸ್ವಾಧೀನಕ್ಕೆ ನೀಡಿರುವ ಲಕ್ಷ್ಮೀಪುರದಲ್ಲಿನ ಜಮೀನು   

ಬೆಂಗಳೂರು: ಬಿಬಿಎಂಪಿಯ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನದಲ್ಲಿ 1,110 ಕಾರ್ಮಿಕ ಕುಟುಂಬಗಳಿಗೆ ನಿವೇಶನಗಳನ್ನು ವಿತರಿಸುವ ಪ್ರಕ್ರಿಯೆ 16 ವರ್ಷವಾದರೂ ಪೂರ್ಣಗೊಂಡಿಲ್ಲ. ಬಡಾವಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಆಡಳಿತಾಧಿಕಾರಿಯವರ ಸಮ್ಮತಿಗೆ ಕಾಯಲಾಗುತ್ತಿದೆ.

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹೊಸದಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಉಚಿತವಾಗಿ ನಿವೇಶನ ವಿತರಿಸಲು 2008ರಲ್ಲಿ ತೀರ್ಮಾನಿಸಿ, ಆದೇಶ ಹೊರಡಿಸಲಾಗಿತ್ತು.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಲಕ್ಷ್ಮೀಪುರದಲ್ಲಿ ಸರ್ವೆ ನಂಬರ್ 24ರಲ್ಲಿ 18 ಎಕರೆ 33 ಗುಂಟೆ, ಸರ್ವೆ ನಂಬರ್‌ 25ರಲ್ಲಿ 3 ಎಕರೆ 9 ಗುಂಟೆ ಹಾಗೂ ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿ ಅಗರ ಗ್ರಾಮದ ಸರ್ವೆ ನಂಬರ್  28ರಲ್ಲಿ 7 ಎಕರೆ 5 ಗುಂಟೆ ಸೇರಿದಂತೆ ಒಟ್ಟು 29 ಎಕರೆ 7 ಗುಂಟೆ ಜಮೀನನ್ನು ಬಿಬಿಎಂಪಿಗೆ ಕಂದಾಯ ಇಲಾಖೆ 2015ರಲ್ಲಿ ಹಸ್ತಾಂತರಿಸಿದೆ.

ADVERTISEMENT

ನಿವೇಶನ ಪಡೆಯುವ ಫಲಾನುಭವಿಗಳನ್ನು ವಲಯ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ದಕ್ಷಿಣ ವಲಯದಲ್ಲಿ 494, ಪಶ್ಚಿಮ ವಲಯದಲ್ಲಿ 206 ಹಾಗೂ ರಾಜರಾಜೇಶ್ವರಿನಗರ ವಲಯದಲ್ಲಿ 410 ಸೇರಿದಂತೆ 1,110 ಫಲಾನುಭವಿಗಳನ್ನು ಆಯ್ಕೆಯಾಗಿದ್ದಾರೆ.

ಬಹುಜನ ವಿಮೋಚನಾ ಚಳವಳಿ ಸಂಚಾಲಕರ ಮನವಿಯಂತೆ, ನಿಯಮಾನುಸಾರ ಜರೂರಾಗಿ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಸರ್ಕಾರದಿಂದ ಮಂಜೂರಾಗಿರುವ ಜಮೀನಿನಲ್ಲಿ ಮಾದರಿ ಬಡಾವಣೆ ನಿರ್ಮಿಸಲು, ಮೂಲಸೌಕರ್ಯಗಳನ್ನು ಒದಗಿಸಲು ಯಲಹಂಕ ಹಾಗೂ ಆರ್‌.ಆರ್. ನಗರ ವಲಯ ಆಯುಕ್ತರು ಒಟ್ಟು ₹42.28 ಕೋಟಿ ವೆಚ್ಚದ ದರಪಟ್ಟಿ ಸಲ್ಲಿಸಿದ್ದಾರೆ. ಇದರಂತೆ ಬಡಾವಣೆ ನಿರ್ಮಿಸಲು ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ ಮಾಡಲು ತೀರ್ಮಾನಿಸುವ ಪ್ರಸ್ತಾವವನ್ನು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರು ಬಿಬಿಎಂಪಿ ಆಡಳಿತಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ.

ಪ್ರಕ್ರಿಯೆ ಮುಗಿದಿಲ್ಲ: ‘ಪಾಲಿಕೆಯೇ ನಿರ್ಧರಿಸಿರುವಂತೆ 1,110 ಅರ್ಹ ಕುಟುಂಬಗಳಿಗೆ ವಿಶೇಷ ಪ್ರಕರಣದಡಿ ನಿವೇಶನ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರ ಅನುಷ್ಠಾನವನ್ನು ಶೀಘ್ರ ಪೂರೈಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಫೆಬ್ರುವರಿಯಿಂದ ನಾಲ್ಕು ಬಾರಿ ಪತ್ರ ಬರೆದಿದ್ದಾರೆ. ಆದರೂ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಪೌರಕಾರ್ಮಿಕರಾಗಿರುವ ಬಡ ಕುಟುಂಬಗಳವರು ನಿವೇಶನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ’ ಎಂದು ಬಹುಜನ ವಿಮೋಚನಾ ಚಳವಳಿಯ ಬೆಂಗಳೂರು ನಗರ ಜಿಲ್ಲೆಯ ಸಂಚಾಲಕ ಎಸ್‌. ಗಂಗಾಧರ ಹೇಳಿದರು.

ಶೀಘ್ರವೇ ಅನುಮೋದನೆ: ಉಮಾಶಂಕರ್‌
‘ವಿಶೇಷ ಘಟಕ ಯೋಜನೆಯ (ಎಸ್‌ಸಿಪಿ/ಟಿಎಸ್‌ಪಿ) ಅನುದಾನ ಬಳಕೆಯಿಂದ ಬಡಾವಣೆಯನ್ನು ವಿಶಿಷ್ಟವಾಗಿ ನಿರ್ಮಿಸಬೇಕೆಂಬ ಉದ್ದೇಶವಿದೆ. ಹೀಗಾಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಯವರು ಈ ಬಗ್ಗೆ ಚರ್ಚಿಸಲು ಸೂಚಿಸಿದ್ದಾರೆ. ಉಪ ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗುತ್ತದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್‌. ಉಮಾಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.