ADVERTISEMENT

ಪ್ರಧಾನಿಯವರಿಗೆ ಹೃದಯವಂತಿಕೆಯ ಬರ: ಬಿ.ಕೆ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:48 IST
Last Updated 6 ಮೇ 2024, 15:48 IST
ಪ್ರೊ.ಬಿ.ಕೆ.ಚಂದ್ರಶೇಖರ್‌
ಪ್ರೊ.ಬಿ.ಕೆ.ಚಂದ್ರಶೇಖರ್‌   

ಬೆಂಗಳೂರು: ರಾಜ್ಯಕ್ಕೆ ಬರ ಪರಿಹಾರವನ್ನು ನೀಡದ ಪ್ರಧಾನಿಯವರಿಗೆ ಹೃದಯವಂತಿಕೆಯ ಬರ ಇದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಟೀಕಿಸಿದ್ದಾರೆ.

ಮೂರನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷ ಭಾಷಣ ಮಾಡಿದ್ದಾರೆ. ‘ಕಾಂಗ್ರೆಸ್‌ನಿಂದ ಮಹಿಳೆಯರ ಮಾಂಗಲ್ಯಕ್ಕೆ ಬರಲಿರುವ ಕುತ್ತು..‘ಮುಸ್ಲಿಂ ಜನಾಂಗದ ಜನಸಂಖ್ಯೆ ಹೆಚ್ಚುತ್ತಿದೆ’.. ಮುಂತಾದ ಕೀಳುಮಟ್ಟದ ಮಾತುಗಳನ್ನಾಡಿ ಚುನಾವಣೆ ಗೆಲ್ಲಲು ಮಾತಿನ ಮಾಲಿನ್ಯವನ್ನು ಉಂಟು ಮಾಡಿದ್ದಾರೆ.  ಬರದ ಏಟು ತಪ್ಪಿಸಿಕೊಳ್ಳಲಾಗದೇ ಬಿಸಿಲಿನಲ್ಲಿ ಕುದಿಯುತ್ತಿರುವ ರೈತರಿಗೆ, ನಿರುದ್ಯೋಗದಿಂದ ಪರಿತಪಿಸುತ್ತಿರುವ ಯುವಜನಾಂಗಕ್ಕೆ ಮೋದಿ ಯಾವುದೇ ಸಂದೇಶ ನೀಡದೇ ಮೌನಕ್ಕೆ ಜಾರಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಅಧಿಕೃತವಾಗಿ ಸಿದ್ಧಪಡಿಸಿದ ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, ಹಲವಾರು ನಿವೇದನೆಗಳು, ಮುಖ್ಯಮಂತ್ರಿ ಮತ್ತಿತರ ಸಚಿವರು, ರಾಜ್ಯದ ತುರ್ತುಪರಿಸ್ಥಿತಿಗೆ ಕೇಂದ್ರದ ತುರ್ತು ಅನುದಾನ ನೀಡುವಂತೆ ಪ್ರಧಾನಿ ಮತ್ತು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು. ಯಾರೊಬ್ಬರೂ ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ರಾಜ್ಯಸರ್ಕಾರ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಬೇಕಾಯಿತು. ನ್ಯಾಯಾಲಯದ ಆದೇಶದಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ₹ 3,454 ಕೋಟಿ ಬಿಡುಗಡೆ ಮಾಡಿದೆ. ₹ 18,170 ಕೋಟಿ ಬಿಡುಗಡೆ ಮಾಡುವ ಬದಲು ಕಡಿಮೆ ಬಿಡುಗಡೆ ಮಾಡಿದೆ ಎಂದು ದೂರಿದ್ದಾರೆ.

ADVERTISEMENT

‘2009ರಲ್ಲಿ ರಾಯಚೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾದಾಗ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನೆರೆ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿಯನ್ನು ಪುರಸ್ಕರಿಸಿ ₹ 1,000 ಕೋಟಿ ಮಂಜೂರು ಮಾಡಿದ್ದರು. ಮನಮೋಹನ್‌ ಸಿಂಗ್‌ ಅವರ ನಡವಳಿಕೆಯನ್ನು, ಇಂದಿನ ಕೇಂದ್ರದ ನಡವಳಿಕೆಯೊಂದಿಗೆ ಹೋಲಿಸಿ ನೋಡಲಿ‘ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.