ADVERTISEMENT

ನ್ಯುಮೋನಿಯಾಗೆ PCV ಲಸಿಕೆ: 5 ವರ್ಷದ ಮಕ್ಕಳಿಗೆ ಅಗತ್ಯ: ಸುರಳ್ಕರ್ ವಿಕಾಸ್ ಕಿಶೋರ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 21:25 IST
Last Updated 16 ನವೆಂಬರ್ 2024, 21:25 IST
<div class="paragraphs"><p>ಸುರಳ್ಕರ್ ವಿಕಾಸ್ ಕಿಶೋರ್</p></div>

ಸುರಳ್ಕರ್ ವಿಕಾಸ್ ಕಿಶೋರ್

   

ಬೆಂಗಳೂರು: ಐದು ವರ್ಷದೊಳಗಿನ ಮಕ್ಕಳಿಗೆ ನ್ಯುಮೋಕಾಕ್ಕಲ್ ಕಾಂಜುಗೇಟ್ ಲಸಿಕೆಯನ್ನು (ಪಿಸಿವಿ) ಕಡ್ಡಾಯವಾಗಿ ಹಾಕಿಸಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ನಾಗರಿಕರಲ್ಲಿ ಮನವಿ ಮಾಡಿಕೊಂಡರು.

ನ್ಯುಮೋನಿಯಾ ಲಸಿಕೆಗೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ನ್ಯುಮೋನಿಯಾ ಹರಡದಂತೆ ಪಾಲಿಕೆ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋಕಾಕ್ಕಲ್ ಕಾಂಜುಗೇಟ್ ಲಸಿಕೆಯನ್ನು 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸೋಂಕು: ನ್ಯುಮೋನಿಯಾ ಶ್ವಾಸಕೋಶದ ಸೋಂಕು. ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳಿಗೆ ಹರಡಿ ಸೋಂಕಿನ ದ್ರವದಿಂದ ಶ್ವಾಸಕೋಶವನ್ನು ಬಲಹೀನಗೊಳಿಸುತ್ತದೆ. ನ್ಯುಮೋನಿಯಾ ಸೋಂಕು ಎರಡೂ ಶ್ವಾಸಕೋಶಗಳಿಗೂ ಹರಡಬಹುದು. ಸರಿಯಾದ ಸಮಯಕ್ಕೆ ಸರಿಯಾದ ಆರೈಕೆಯಿಂದ ಸೋಂಕು ತಗುಲಿದ ಮಗುವನ್ನು ರಕ್ಷಿಸಬಹುದು ಎಂದರು.

ಕೆಮ್ಮು ಮತ್ತು ನೆಗಡಿ, ತೀವ್ರ ಜ್ವರ, ಉಸಿರಾಟದ ತೊಂದರೆ,  ಎದೆಯ ಸೆಳೆತ, ಹಸಿವು ಇಲ್ಲದಿರುವುದು, ಸುಸ್ತು, ಅಪಸ್ಮಾರ, ಕೆಮ್ಮು ಮತ್ತು ಹಳದಿ / ರಕ್ತದ ಕಫ ಬರುವುದು ಸೋಂಕಿನ ಲಕ್ಷಣಗಳು ಎಂದು ವಿವರಿಸಿದರು.

ಮಗುವಿಗೆ ಮೊದಲ 6 ತಿಂಗಳು ಸಂಪೂರ್ಣವಾಗಿ ಎದೆಹಾಲು ನೀಡುವುದು. 2 ವರ್ಷದೊಳಗಿನ ಮಕ್ಕಳಿಗೆ ಉತ್ತಮ ಪೋಷಣೆ ನೀಡುವುದು. ಸುರಕ್ಷಿತ ಕುಡಿಯುವ ನೀರು ಮತ್ತು ಉತ್ತಮ ನೈರ್ಮಲ್ಯ.  ಸಾಬೂನು ಬಳಸಿ ಕೈಗಳನ್ನು ಶುಚಿಗೊಳಿಸುವುದು. ಮಗುವಿಗೆ ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವುದು. ಮನೆಯೊಳಗೆ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಹಾಗೂ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ನ್ಯುಮೋಕಾಕ್ಕಲ್ ಕಾಂಜುಗೇಟ್ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.