ಬೆಂಗಳೂರು: ಭಾರತ ಸೀನಿಯರ್ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ವಿರುದ್ಧ ದಾಖಲಾಗಿರುವ ‘ಪೋಕ್ಸೊ’ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಪ್ರಕರಣದ ತನಿಖೆ ನಡೆಸುತ್ತಿರುವ ಜ್ಞಾನಭಾರತಿ ಠಾಣೆ ಪೊಲೀಸರು, ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ.
ಆತ್ಯಾಚಾರದ ದೂರು ನೀಡಿರುವ ಯುವತಿ ಹಾಗೂ ವರುಣ್ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆ ವಿವರ, ಸಂದೇಶಗಳು ಹಾಗೂ ಧ್ವನಿ ಮುದ್ರಿಕೆಗಳೂ ಸೇರಿದಂತೆ ಇತರೆ ಸಾಕ್ಷ್ಯಾಧಾರಗಳನ್ನು ತನಿಖೆ ದೃಷ್ಟಿಯಿಂದ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವರುಣ್ ಅವರನ್ನು ಇನ್ನೂ ಸಂಪರ್ಕಿಸಿಲ್ಲ. ಅವರು ಹೊರರಾಜ್ಯದಲ್ಲಿದ್ದು, ಶೀಘ್ರದಲ್ಲೆ ಅವರನ್ನು ವಿಚಾರಣೆಗೆ ಕರೆಸಲಾಗುವುದು. ಅವರು ತರಬೇತಿಯಲ್ಲಿರುವ ಮಾಹಿತಿಯಿದ್ದು ಅಲ್ಲಿಗೆ ಇದುವರೆಗೂ ಪೊಲೀಸ್ ತಂಡ ಕಳುಹಿಸಿಲ್ಲ. ವಿಚಾರಣೆಗೆ ಅವರೇ ಖುದ್ದು ಹಾಜರಾಗದಿದ್ದರೆ ಅವರಿರುವ ಸ್ಥಳಕ್ಕೆ ತಂಡವನ್ನು ಕಳುಹಿಸಿ ವಿಚಾರಣೆಗೆ ಕರೆತರಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸಾಕ್ಷ್ಯಾಧಾರ ಸಂಗ್ರಹಿಸಿದ ಬಳಿಕ ಪ್ರಕರಣ ಸಂಬಂಧ ಅವರಿಬ್ಬರ ಸ್ನೇಹಿತರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯೊಬ್ಬರಿಗೆ ಅವರ ಬಾಲ್ಯದ ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಅಡಿ ವರುಣ್ ಕುಮಾರ್ ವಿರುದ್ಧ ‘ಪೋಕ್ಸೊ’ ಪ್ರಕರಣ ದಾಖಲಾಗಿದೆ. ತೆಲಂಗಾಣದ 22 ವರ್ಷದ ಯುವತಿ ಸೋಮವಾರ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
‘2018ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ನನಗೆ ಪರಿಚಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ಒಪ್ಪಿಸಿ 2019ರ ಜುಲೈನಲ್ಲಿ ಹೋಟೆಲ್‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ’ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.