ADVERTISEMENT

ಪೋಕ್ಸೊ ಪ್ರಕರಣ: ಬಿಎಸ್‌ವೈ ವಿಡಿಯೊ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:30 IST
Last Updated 17 ಜೂನ್ 2024, 15:30 IST
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ   

ಬೆಂಗಳೂರು: ಪೋಕ್ಸೊ ಪ್ರಕರಣವೊಂದರಲ್ಲಿ ಹೈಕೋರ್ಟ್‌ ಸೂಚನೆ ಮೇರೆಗೆ ಸೋಮವಾರ ಸಿಐಡಿ ವಿಚಾರಣೆಗೆ ಹಾಜರಾದ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡರು.

ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಬಂದ ಯಡಿಯೂರಪ‍್ಪ ಅವರನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ವಿಚಾರಣೆ ನಡೆಸಲಾಯಿತು. ತನಿಖಾಧಿಕಾರಿ ಡಿವೈಎಸ್‌ಪಿ ಪುನೀತ್‌ ಎದುರು ಯಡಿಯೂರಪ್ಪ ಹೇಳಿಕೆ ನೀಡಿದರು ಎಂದು ಗೊತ್ತಾಗಿದೆ. 

‘ಮೊದಲು ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ನಂತರ ವಿಡಿಯೊ ಹೇಳಿಕೆ ದಾಖಲು ಮಾಡಿಕೊಳ್ಳಲಾಯಿತು. ಇದನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಹದಿನೇಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಅಡಿ ತಮ್ಮ ವಿರುದ್ಧ ದಾಖಲಾಗಿದ್ದ ಪೋಕ್ಸೊ ಸಂಬಂಧ ವಿಚಾರಣೆಗೆ ಯಡಿಯೂರಪ್ಪ ಹಾಜರಾಗಿದ್ದರು.

‘ಮಗಳ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಕೋರಿ ಯಡಿಯೂರಪ್ಪ ಅವರ ಮನೆಗೆ ತೆರಳಿದ್ದೆ. ಅಂದು ಪುತ್ರಿ ಸಹ ನನ್ನ ಜೊತೆಗೆ ಇದ್ದಳು. ಆಗ, ಯಡಿಯೂರಪ್ಪ ಸಹಾಯ ಮಾಡುವ ನೆಪದಲ್ಲಿ ಮಗಳನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು.

ಪ್ರಕರಣ ಏನು ಎತ್ತ?

ಫೆ.2ರಂದು ನ್ಯಾಯ ಕೇಳಿ ಬಿ.ಎಸ್​.ಯಡಿಯೂರಪ್ಪ ಮನೆಗೆ ತೆರಳಿದ್ದ ಸಂತ್ರಸ್ತೆ ಹಾಗೂ ಆಕೆಯ ತಾಯಿ.

ಮಾ.​ 3ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿಯಿಂದ ದೂರು ದಾಖಲು.

ಮಾ. 14ರಂದು ಸದಾಶಿವನಗರ ಠಾಣೆಯಲ್ಲಿ ಬಿಎಸ್​​​ವೈ ವಿರುದ್ಧ ಪೋಕ್ಸೊ ಪ್ರಕರಣ ದಾಖಲು. ನಂತರ, ಎಸಿಎಂಎಂ 25ನೇ ನ್ಯಾಯಾಧೀಶರ ಎದುರು ಸಂತ್ರಸ್ತೆಯ ಹೇಳಿಕೆ ದಾಖಲು.

ಮಾ. 14ರಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದ ಸರ್ಕಾರ.

ಏ. 12ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ಸಿಐಡಿ ನೋಟಿಸ್, ನಂತರ ತನಿಖಾಧಿಕಾರಿಗಳು ಧ್ವನಿ ಮಾದರಿ ಸಂಗ್ರಹಿಸಿದ್ದರು.

ಜೂ. 12ರಂದು ಬಂಧನ ವಾರಂಟ್‌ ಜಾರಿಗೊಂಡಿತ್ತು.

ಜೂ. 14ರಂದು ಮುಂದಿನ ವಿಚಾರಣೆ ನಡೆಯುವವರೆಗೂ ಯಡಿಯೂರಪ್ಪ ಅವರನ್ನು ಬಂಧಿಸದಂತೆ  ಸೂಚಿಸಿದ್ದ ಹೈಕೋರ್ಟ್‌, ಸಿಐಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.