ಬೆಂಗಳೂರು: ಒಂದು ಕಡೆ ಬಳಸಲು ಕಷ್ಟವಾಗುವ ಸ್ಕೈವಾಕ್, ಇನ್ನೊಂದೆಡೆ ಬಳಕೆಗೆ ತೆರೆದುಕೊಳ್ಳದ ಸ್ಕೈವಾಕ್, ಮತ್ತೊಂದೆಡೆ ವಿಪರೀತ ವಾಹನ ದಟ್ಟಣೆಯ ನಡುವೆ ನುಸುಳಿಕೊಂಡು ರಸ್ತೆ ದಾಟುವ ಪಾದಚಾರಿಗಳು...
ಇದು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಿತ್ಯ ಕಾಣುವ ಅಪಾಯಕಾರಿ ದೃಶ್ಯಗಳು...!
ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯೇ ‘ನಮ್ಮ ಮೆಟ್ರೊ’ ರೈಲು ನಿಲ್ದಾಣವಿದೆ. ಆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಹೋಗಲು ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಿಸಲಾಗಿದೆ. ಆದರೆ, ಜನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಮೆಟ್ರೊ ಪ್ರಯಾಣಿಕರು ಕೆಳಗಿಳಿದು ಒಳಬರುವ ರಸ್ತೆಯನ್ನು ದಾಟಿಕೊಂಡೇ ಬಸ್‌ನಿಲ್ದಾಣಕ್ಕೆ ತಲುಪಬೇಕು.
ಇದಕ್ಕಿಂತಲೂ ಅಪಾಯಕಾರಿಯಾದುದು ಮುಖ್ಯರಸ್ತೆ ದಾಟುವ ಸಾಹಸ. ಮೈಸೂರು, ಮಂಡ್ಯ, ಮದ್ದೂರು ಕಡೆಗಳಿಂದ ಬರುವ ಬಸ್‌ಗಳು ಕೆಂಗೇರಿ ಬಸ್‌ನಿಲ್ದಾಣ ಪ್ರವೇಶಿಸದೇ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸಿ ಮೆಜೆಸ್ಟಿಕ್ ಕಡೆಗೆ ಸಾಗುತ್ತವೆ. ಅಲ್ಲಿ ಇಳಿದ ಪ್ರಯಾಣಿಕರು ಚಲಿಸುತ್ತಿರುವ ವಾಹನಗಳ ನಡುವೆಯೇ ದಾರಿ ಮಾಡಿಕೊಂಡು ರಸ್ತೆ ದಾಟುತ್ತಾರೆ. ಇದೇ ರಸ್ತೆಯ ಮತ್ತೊಂದು ಭಾಗದಲ್ಲಿ ಮೈಸೂರು, ಮಂಡ್ಯ, ಮದ್ದೂರು ಕಡೆಗೆ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಕರೆಯುತ್ತಿರುತ್ತಾರೆ. ಮೊದಲೇ ವಾಹನದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಬಸ್‌ಗಳು ಹೀಗೆ ನಿಲ್ಲುತ್ತಿರುವುದರಿಂದ ಸರಾಗ ಪ್ರಯಾಣಕ್ಕೆ ಅಡ್ಡಿಯಾಗಿ ಕಿಲೋಮೀಟರ್ ದೂರ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.
ಸ್ಕೈವಾಕ್ ಸಮಸ್ಯೆ: ಈ ರಸ್ತೆಯಲ್ಲಿ ಸಂಚಾರ ದಟ್ಟಣೆಯ ಕಾರಣ, ಜನರು ರಸ್ತೆ ದಾಟಲು ಸ್ಕೈವಾಕ್ ನಿರ್ಮಿಸಲಾಗಿದೆ. ಆದರೆ, ವಯಸ್ಸಾದವರು ಮೆಟ್ಟಿಲು ಹತ್ತಲು ಪ್ರಯಾಸ ಪಡುತ್ತಾರೆ. ಲಿಫ್ಟ್ ಅಳಡವಿಕೆಗಾಗಿ ಎರಡೂ ಬದಿಯಲ್ಲಿ ಜಾಗ ಬಿಟ್ಟಿದ್ದಾರೆ. ಆ ಕಾರ್ಯ ಅರ್ಧಕ್ಕೆ ನಿಂತಿದೆ. ಹಾಗಾಗಿ ವಯಸ್ಸಾದವರು ಸ್ಕೈವಾಕ್ ಬಳಸದೇ ವಾಹನ ದಟ್ಟಣೆಯ ನಡುವೆಯೇ ರಸ್ತೆ ದಾಟುತ್ತಾರೆ. ವಯಸ್ಸಾದವರಷ್ಟೇ ಅಲ್ಲ, ಯುವಜನರು ಕೂಡ ಸ್ಕೈವಾಕ್ ಬಳಸುತ್ತಿಲ್ಲ. ಏಕೆಂದರೆ ಸ್ಕೈವಾಕ್ ಹತ್ತಿ ಬಸ್‌ನಿಲ್ದಾಣದ ಕಡೆಗೆ ಬಂದು ಇಳಿಯುವ ಜಾಗದಲ್ಲಿ ಹೊಂಡ ಬಿದ್ದಿದೆ. ಅದರಲ್ಲಿ ಕೆಸರು ತುಂಬಿಕೊಂಡಿದೆ. ಪಕ್ಕದಲ್ಲೇ ‘ನೋ ಪಾರ್ಕಿಂಗ್’ ಎಂದು ಬೋರ್ಡ್ ಹಾಕಿದ್ದರೂ ನೂರಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿದೆ. ಗುಂಡಿ ತಪ್ಪಿಸಿಸಿದರೂ, ದ್ವಿಚಕ್ರ ವಾಹನಗಳ ಸಂದಿಯಲ್ಲಿ ಸಾಗಬೇಕು. ಈ ಕಷ್ಟಗಳೇ ಬೇಡ ಎಂದು ಅವರು ಸ್ಕೈವಾಕ್ ಕಡೆ ಮುಖ ಮಾಡುತ್ತಿಲ್ಲ.
ತಡೆಯದ ಬ್ಯಾರಿಕೇಡ್: ಪಾದಚಾರಿಗಳು ಸ್ಕೈವಾಕ್ ಮೂಲಕವೇ ಸಂಚರಿಸಬೇಕು ಎಂದು ಪೊಲೀಸರು ಬ್ಯಾರಿಕೇಡ್ ಹಾಕಿ (ಡಿವೈಡರ್ ನಡುವೆ ಸಾಗುತ್ತಿದ್ದ ಜಾಗಕ್ಕೆ) ರಸ್ತೆಯನ್ನು ಮುಚ್ಚಿದ್ದಾರೆ. ಆದರೆ, ಪೊಲೀಸರು ಅತ್ತ ಹೋದ ಕೂಡಲೇ ಜನರು ಬ್ಯಾರಿಕೇಡ್ ಬದಿಗೆ ಸರಿಸಿ ರಸ್ತೆ ದಾಟುತ್ತಿದ್ದಾರೆ.
ಜಾಗೃತಿ ಮೂಡಿಸಿ: ವಯಸ್ಸಾದವರು, ಮಂಡಿನೋವು ಇರುವವರಿಗೆ ಸ್ಕೈವಾಕ್ ಹತ್ತುವುದು ಕಷ್ಟ. ಆದರೆ, ಕೈಕಾಲು ಗಟ್ಟಿಯಿರುವವರು ಕೂಡ ಸುಲಭ ಮತ್ತು ಹತ್ತಿರ ದಾರಿ ಎಂದು ರಸ್ತೆಯಲ್ಲೇ ಹೋಗುತ್ತಿದ್ದಾರೆ. ಅವರಿಗೆ ಜಾಗೃತಿ ಮೂಡಿಸಬೇಕು. ಪೊಲೀಸರು ಬ್ಯಾರಿಕೇಡ್ ಅಳವಡಿಸುವ ಬದಲು, ಅದೇ ಜಾಗದಲ್ಲಿ ನಿಂತು ಎಲ್ಲರನ್ನೂ ಸ್ಕೈವಾಕ್ ಕಡೆ ಕಳುಹಿಸಬೇಕು. ಶೀಘ್ರವೇ ಲಿಫ್ಟ್ ಅಳವಡಿಕೆ ಪೂರ್ಣಗೊಳ್ಳಬೇಕು. ಮೆಟ್ರೊ ನಿಲ್ದಾಣ– ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿರುವ ಸ್ಕೈವಾಕ್ ಅನ್ನು ಸಾರ್ವಜನಿಕರಿಗೆ ಪ್ರವೇಶಕ್ಕೆ ಮುಕ್ತಗೊಳಿಸಬೇಕು‘ ಎಂದು ಕೆಂಗೇರಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾದ ಲಕ್ಷ್ಮೀ, ತ್ರಿವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಹಿರಿಯರಿಗೆ ಸ್ಕೈವಾಕ್ ಮೆಟ್ಟಿಲು ಹತ್ತುವುದು ಕಷ್ಟವಿದೆ. ಆದರೆ, ಯುವ ಜನರು ಆರಾಮವಾಗಿ ಬಳಸಬಹುದು. ಸೋಮಾರಿತನದಿಂದಾಗಿ ಅವರು ಸ್ಕೈವಾಕ್ ಕಡೆ ಬರುತ್ತಿಲ್ಲ. ಶೀಘ್ರವೇ ಲಿಫ್ಟ್ ಅಥವಾ ಎಸ್ಕಲೇಟರ್ ನಿರ್ಮಿಸಿ, ಎಲ್ಲರೂ ಸ್ಕೈವಾಕ್ ಮೂಲಕವೇ ಸಾಗುವಂತೆ ಮಾಡಬೇಕು.-ಪ್ರತೀಕ್ಷಾ, ಐಟಿ ಉದ್ಯೋಗಿ
ಜನದಟ್ಟಣೆ ಹೆಚ್ಚಿರುವಾಗ ಪೊಲೀಸರು ಬರುತ್ತಾರೆ. ಜನ ಸ್ಕೈವಾಕ್ ಅನ್ನೇ ಬಳಸಲಿ ಎಂದು ಬ್ಯಾರಿಕೇಡ್ ಹಾಕಿ ರಸ್ತೆ ವಿಭಜಕವನ್ನು ಮುಚ್ಚುತ್ತಾರೆ. ಅವರ ಜೊತೆಗೆ ನಾವೂ ಕೈಜೋಡಿಸಿ ಬ್ಯಾರಿಕೇಡ್ ಅಳವಡಿಕೆ ಸಹಾಯ ಮಾಡುತ್ತೇವೆ. ಆದರೆ, ಪೊಲೀಸರು ಆ ಕಡೆ ಹೋಗುತ್ತಿದ್ದಂತೆ ಪಾದಚಾರಿಗಳು ಬ್ಯಾರಿಕೇಡ್ ಬದಿಗೆ ಸರಿಸಿ ಅಲ್ಲಿಂದಲೇ ಓಡಾಡುತ್ತಾರೆ.-ದಿನೇಶ್ ಮದ್ದೂರು, ಪೇರಳೆಹಣ್ಣು ವ್ಯಾಪಾರಿ, ಕೆಂಗೇರಿ
ರಸ್ತೆ ದಾಟುವಾಗ ವಾಹನಗಳು ಎಲ್ಲಿ ಮೈಮೇಲೆ ಬಂದು ಬಿಡುತ್ತಾವೊ ಅಂತ ಭಯ ಆಗುತ್ತೆ. ಅದಕ್ಕೆ ನಾನು ಮೆಟ್ಟಿಲು ಹತ್ತಿಕೊಂಡು ಸ್ಕೈವಾಕ್ ಮೂಲಕ ರಸ್ತೆ ದಾಟುತ್ತೇನೆ. ಮಂಡಿನೋವಿದೆ, ಮೆಟ್ಟಿಲು ಹತ್ತುವುದೂ ಕಷ್ಟ. ನಮ್ಮಂಥವರು ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಏನಾದರೂ ವ್ಯವಸ್ಥೆ ಮಾಡ್ರಪ್ಪ.-ಸಾವಿತ್ರಮ್ಮ, ಗಾರ್ಮೆಂಟ್ ಉದ್ಯೋಗಿ
ಬಿಬಿಎಂಪಿ ಅವರಿಗೂ ಸೆನ್ಸ್ ಇಲ್ಲ, ಜನರಿಗೂ ಸೆನ್ಸ್ ಇಲ್ಲ. ಈ ಸ್ಕೈವಾಕ್ ಹತ್ತಿ ಬರುವುದು ಹಿರಿಯರಿಗೆ ಕಷ್ಟ. ಆದರೆ, ರಸ್ತೆ ದಾಟುತ್ತಿರುವವರಲ್ಲಿ ಶೇ 90ರಷ್ಟು ಮಂದಿ ಯುವಜನರೇ ಇದ್ದಾರೆ. ಸ್ಕೈವಾಕ್ ಬಳಸುವಂತೆ ಅವರಿಗೆ ಅರಿವು ಮೂಡಿಸಬೇಕು.-ಸಂತೋಷ್, ಕಾಲೇಜು ವಿದ್ಯಾರ್ಥಿ
ಸ್ಕೈವಾಕ್ ಮಾಡಿದ ಮೇಲೆ ಲಿಫ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಕಾಮಗಾರಿ ಬಹಳ ನಿಧಾನವಾಗಿದೆ. ವೇಗವಾಗಿ ಕೆಲಸ ಮುಗಿಸಿದರೆ, ಜನರಿಗೆ ಉಪಯೋಗವಾಗುತ್ತದೆ.-ರೂಪಾ, ಗೂಡಂಗಡಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.