ADVERTISEMENT

ಬೆಂಗಳೂರು: ಮೇಖ್ರಿ ವೃತ್ತದಲ್ಲಿ ಸ್ಕೈವಾಕ್ ಅಸುರಕ್ಷಿತ, ಕೆಟ್ಟು ನಿಂತ ಲಿಫ್ಟ್

ಮನವಿ ನೀಡಿದರೂ ಸ್ಪಂದಿಸದ ಬಿಬಿಎಂಪಿ– ದೂರು

ಸಂತೋಷ ಜಿಗಳಿಕೊಪ್ಪ
Published 12 ನವೆಂಬರ್ 2023, 0:30 IST
Last Updated 12 ನವೆಂಬರ್ 2023, 0:30 IST
<div class="paragraphs"><p>ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದಲ್ಲಿರುವ ಸ್ಕೈವಾಕ್‌ ಇಳಿಯುತ್ತಿರುವ ವೃದ್ಧರು</p><p></p></div>

ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದಲ್ಲಿರುವ ಸ್ಕೈವಾಕ್‌ ಇಳಿಯುತ್ತಿರುವ ವೃದ್ಧರು

   

– ಪ್ರಜಾವಾಣಿ ಚಿತ್ರಗಳು/ಕಿಶೋರ್ ಕುಮಾರ್ ಬೋಳಾರ್

ADVERTISEMENT

ಬೆಂಗಳೂರು: ಕೆಟ್ಟು ನಿಂತು 6 ತಿಂಗಳಾದರೂ ದುರಸ್ತಿಯಾಗದ ಲಿಫ್ಟ್. ಮಾರ್ಗದುದ್ದಕ್ಕೂ ಅಪಾಯಕ್ಕೆ ಆಹ್ವಾನ ನೀಡುವ ಜಾಗಗಳು. ಸಾಲುಗಟ್ಟಿ ಸಂಚರಿಸುವ ವಾಹನಗಳನ್ನು ಮೇಲಿಂದ ನೋಡಿ ತಲೆ ಸುತ್ತಿ ಬೀಳುವ ಭಯದಲ್ಲಿ ಸಂಚರಿಸುವ ವೃದ್ಧರು. ಅವ್ಯವಸ್ಥೆಯಿಂದಾಗಿ ಒಂದು ತುದಿಯಿಂದ ಮತ್ತೊಂದು ತುದಿಗೆ ಆತಂಕದಲ್ಲಿ ಸಂಚರಿಸುವ ಶಾಲಾ ಮಕ್ಕಳು ಹಾಗೂ ಶಿಕ್ಷಕರು...

ಇದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದಲ್ಲಿರುವ ಸ್ಕೈವಾಕ್‌ ಸ್ಥಿತಿ. ಅತಿಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ನಿತ್ಯವೂ ದಟ್ಟಣೆ ಸಾಮಾನ್ಯ. ವಾಹನಗಳ ನಡುವೆ ನುಸುಳಿಕೊಂಡು ಒಂದು ಬದಿಯಿಂದ ಮತ್ತೊಂದು ಬದಿಗೆ ಪಾದಚಾರಿಗಳು ಸಂಚರಿಸುವ ಸಂದರ್ಭದಲ್ಲಿ ಅಪಘಾತಗಳು ಉಂಟಾಗಿರುವ ಪ್ರಕರಣಗಳೂ ದಾಖಲಾಗಿವೆ.

ಇದೇ ಕಾರಣಕ್ಕೆ ಪಾದಚಾರಿಗಳ ಅನುಕೂಲಕ್ಕಾಗಿ ಮೇಖ್ರಿ ವೃತ್ತದಲ್ಲಿ ಸ್ಕೈವಾಕ್ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆ ಹಾಗೂ ಅಸುರಕ್ಷಿತ ಕ್ರಮಗಳಿಂದಾಗಿ ಭಯದಲ್ಲಿಯೇ ಜನರು ಸ್ಕೈವಾಕ್ ಬಳಸುತ್ತಿದ್ದಾರೆ.

ವಾಯುಸೇನೆ ಕಮಾಂಡೊ ತರಬೇತಿ ಕೇಂದ್ರಕ್ಕೆ ಹೊಂದಿಕೊಂಡಂತೆ ಬಸ್‌ ತಂಗುದಾಣ (ಆರ್‌.ಟಿ.ನಗರದ ಗಂಗಾನಗರ ಬಳಿಯ ಅಶ್ವತ್ಥನಗರ) ನಿರ್ಮಿಸಲಾಗಿದೆ. ನಗರದಿಂದ ಹೆಬ್ಬಾಳ ಹಾಗೂ ವಿಮಾನ ನಿಲ್ದಾಣದತ್ತ ಹೋಗುವ ಬಸ್‌ಗಳು ಇದೇ ತಂಗುದಾಣಕ್ಕೆ ಬಂದು ಮುಂದಕ್ಕೆ ಸಾಗುತ್ತದೆ. ಅದೇ ರೀತಿ ಹೆಬ್ಬಾಳ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಬಸ್‌ಗಳು, ಎದುರು ಬದಿಯ ರಸ್ತೆಯಲ್ಲಿರುವ ಬಸ್‌ ತಂಗುದಾಣದ ಮೂಲಕ ಸಂಚರಿಸುತ್ತವೆ.

ಎರಡು ನಿಲ್ದಾಣಗಳಿಗೆ ಹಾಗೂ ಅಕ್ಕ–ಪಕ್ಕದ ಪ್ರದೇಶಗಳಿಗೆ ಸಂಚರಿಸಲು ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಬಿಎಂಪಿ ವತಿಯಿಂದ 5.5 ಮೀಟರ್ ಎತ್ತರದ ಸ್ಕೈವಾಕ್ ನಿರ್ಮಿಸಿ, 2017ರಲ್ಲಿ ಜನರ ಸೇವೆಗೆ ಮುಕ್ತಗೊಳಿಸಲಾಗಿದೆ. ಕೇಂದ್ರೀಯ ವಿದ್ಯಾಲಯ, ಜಿಆರ್‌ವಿ ಕಾಲೇಜ್, ಸಿಬಿಐ ಕಚೇರಿ, ಜಿಎಸ್‌ಟಿ ಕಮಿಷನರ್ ಕಚೇರಿ, ವಾಯುಪಡೆ ಕಮಾಂಡೊ ತರಬೇತಿ ಕೇಂದ್ರ ಹಾಗೂ ಇತರೆ ಪ್ರಮುಖ ಸ್ಥಳಗಳು ಈ ಸ್ಕೈವಾಕ್‌ನ ಅಕ್ಕ–ಪಕ್ಕದಲ್ಲಿವೆ.

‘ವಿಪರೀತ ದಟ್ಟಣೆ ಇರುವ ಬಳ್ಳಾರಿ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿರುವುದು ಪಾದಚಾರಿಗಳಿಗೆ ಹೆಚ್ಚು ಅನುಕೂಲವಾಗಿದೆ. ಆದರೆ, ನಿರ್ವಹಣೆ ಇಲ್ಲದಿದ್ದರಿಂದ ಸ್ಕೈವಾಕ್ ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಆರ್.ಲಕ್ಷ್ಮಿ ತಿಳಿಸಿದರು.

‘ನಿತ್ಯವೂ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುತ್ತೇನೆ. ಮೇಖ್ರಿ ವೃತ್ತದಲ್ಲಿ ರಸ್ತೆ ದಾಟಲು ಸ್ಕೈವಾಕ್ ಬಳಸುತ್ತೇನೆ. ಆರಂಭದಲ್ಲಿ ಸ್ಕೈವಾಕ್ ನಿರ್ವಹಣೆ ಚೆನ್ನಾಗಿತ್ತು. ಇತ್ತೀಚಿನ ಕೆಲ ತಿಂಗಳಿನಿಂದ ಯಾರೂ ನಿರ್ವಹಣೆ ಮಾಡುತ್ತಿಲ್ಲ. ಸ್ಕೈವಾಕ್ ಮೇಲೆ ನಮೂದಿಸಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ’ ಎಂದು ಅವರು ದೂರಿದರು.

ಲಿಫ್ಟ್‌ ಕೆಟ್ಟಿದ್ದರಿಂದ ವೃದ್ಧರಿಗೆ ತೊಂದರೆ: ‘ಸ್ಕೈವಾಕ್‌ನ ಎರಡೂ ಬದಿಯ ಲಿಫ್ಟ್‌ಗಳು ಕೆಟ್ಟು ಆರು ತಿಂಗಳಾಗಿದೆ. 5.5 ಮೀಟರ್ ಎತ್ತರದ ಸ್ಕೈವಾಕ್ ಏರಿ, ನಂತರ ರಸ್ತೆಗೆ ಇಳಿದು ಹೋಗಲು ವೃದ್ಧರು ಕಷ್ಟಪಡುತ್ತಿದ್ದಾರೆ. ಹಲವರು, ಸ್ಕೈವಾಕ್ ಇಳಿದ ಕೂಡಲೇ ರಸ್ತೆ ಬದಿಯಲ್ಲಿ ಕುಳಿತು ವಿಶ್ರಾಂತಿ ಪಡೆದು ಮುಂದಕ್ಕೆ ಹೋಗುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ರಾಹುಲ್‌ ಕುಮಾರ್ ಹೇಳಿದರು.

‘ಲಿಫ್ಟ್‌ ಸರಿಪಡಿಸುವಂತೆ ಸ್ಥಳೀಯರೆಲ್ಲರೂ ಸೇರಿ ಬಿಬಿಎಂಪಿಗೆ ದೂರು ನೀಡಿದ್ದೇವೆ. ಆದರೆ, ಇದುವರೆಗೂ ಲಿಫ್ಟ್‌ ಸರಿಪಡಿಸಿಲ್ಲ. ಅಧಿಕಾರಿಗಳು ತುರ್ತಾಗಿ ಲಿಫ್ಟ್‌ ದುರಸ್ತಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ವೃದ್ಧೆ ಲಲಿತಾ, ‘ಕೆಲಸ ನಿಮಿತ್ತ ತಿಂಗಳಿಗೊಮ್ಮೆ ಮೇಖ್ರಿ ವೃತ್ತಕ್ಕೆ ಬಂದು ಹೋಗುತ್ತೇನೆ. ಈ ವೇಳೆ ಸ್ಕೈವಾಕ್‌ ಬಳಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಲಿಫ್ಟ್‌ ಇಲ್ಲ. ಹತ್ತಿ ಇಳಿಯಲು ಕಷ್ಟವಾಗುತ್ತಿದೆ’ ಎಂದರು.

ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಹಾಗೂ ಸ್ಕೈವಾಕ್‌ ಮೆಟ್ಟಿಲು ಬಳಿ ಕೆಟ್ಟಿರುವ ಲಿಫ್ಟ್‌ ಬಾಗಿಲು ಮುಚ್ಚಿರುವುದು

‘ಎರಡೂ ಬದಿಯನ್ನೂ ಹೊದಿಕೆಯಿಂದ ಮುಚ್ಚಿ’

‘ಸ್ಕೈವಾಕ್ ಕೆಳಗಿನ ರಸ್ತೆಯಲ್ಲಿ ಪ್ರತಿ ಸಮಯದಲ್ಲೂ ವಾಹನಗಳ ಸಾಲು ಇರುತ್ತದೆ. ಸ್ಕೈವಾಕ್‌ನಲ್ಲಿ ನಡೆದುಕೊಂಡು ಹೋಗುವ ಕೆಲವರು ವಾಹನಗಳ ಸಾಲು ನೋಡಿ ಹೆದರಿ ತಲೆ ಸುತ್ತಿ ಬೀಳುವ ಸಂಭವ ಹೆಚ್ಚಿದೆ. ಇದೇ ಕಾರಣಕ್ಕೆ ಸ್ಕೈವಾಕ್‌ನ ಎರಡೂ ಬದಿಯನ್ನು ಹೊದಿಕೆಯಿಂದ ಮುಚ್ಚಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು. ‘ಸ್ಕೈವಾಕ್‌ ಮೇಲೆ ಮಕ್ಕಳು ಹೆಚ್ಚು ಓಡಾಡುತ್ತಾರೆ. ಕೆಲವರಂತೂ ಅಲ್ಲಿಯೇ ಆಟವಾಡುತ್ತಿರುತ್ತಾರೆ. ಸ್ಕೈವಾಕ್‌ನ ಎರಡೂ ಬದಿಯಲ್ಲೂ ತೆರೆದ ಸ್ಥಳಗಳು ಹೆಚ್ಚಿವೆ. ಅದರಿಂದ ಮಕ್ಕಳು ಆಯತಪ್ಪಿ ರಸ್ತೆಗೆ ಬೀಳುವ ಸಾಧ್ಯತೆ ಇದೆ. ತೆರೆದ ಸ್ಥಳಗಳನ್ನೂ ಸಂಪೂರ್ಣವಾಗಿ ಬಂದ್ ಮಾಡಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸ್ಕೈವಾಕ್ ಭದ್ರತೆಗೆ ಸಿಬ್ಬಂದಿ’

ಸ್ಕೈವಾಕ್‌ನ ಸಮರ್ಪಕ ಬಳಕೆ ಬಗ್ಗೆ ತಿಳಿಹೇಳಲು ಹಾಗೂ ತುರ್ತು ಸಂದರ್ಭದಲ್ಲಿ ಸಹಾಯಕ್ಕೆಂದು ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲುವ ಸಿಬ್ಬಂದಿ ಸ್ಕೈವಾಕ್‌ನಲ್ಲಿ ಜನರು ಸುರಕ್ಷಿತವಾಗಿ ಸಂಚರಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ‘ಸ್ಕೈವಾಕ್‌ನಲ್ಲಿ ಯಾರಾದರೂ ಸುಖಾಸುಮ್ಮನೇ ನಿಂತಿದ್ದರೆ ಓಡಾಡುತ್ತಿದ್ದರೆ ಹಾಗೂ ಆಟವಾಡುತ್ತಿದ್ದರೆ ಅವರನ್ನು ಸ್ಥಳದಿಂದ ಕಳುಹಿಸುತ್ತೇವೆ. ಜೊತೆಗೆ ನಿತ್ಯವೂ ಸ್ಕೈವಾಕ್‌ ಸ್ವಚ್ಛಗೊಳಿಸುತ್ತೇವೆ’ ಎಂದು ಸಿಬ್ಬಂದಿ ಹೇಳಿದರು.

ನಿತ್ಯವೂ ಸ್ಕೈವಾಕ್ ಬಳಸುತ್ತೇನೆ. ಲಿಫ್ಟ್‌ ಕೆಟ್ಟಿದ್ದರಿಂದ ತುಂಬಾ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಲಿಫ್ಟ್‌ ದುರಸ್ತಿ ಮಾಡಬೇಕು. ವೃದ್ಧರು ಶಾಲಾ ಮಕ್ಕಳಿಗೆ ಮತ್ತಷ್ಟು ಅನುಕೂಲ ಆಗುತ್ತದೆ
–ಪ್ರಿಯಾ ಪೊನ್ನಂಮುರುಗನ್, ಶಿಕ್ಷಕಿ
ಸ್ಕೈವಾಕ್‌ನಲ್ಲಿ ಮಕ್ಕಳು ಹೆಚ್ಚಾಗಿ ಓಡಾಡುತ್ತಾರೆ. ಎರಡೂ ಬದಿಯೂ ಕಬ್ಬಿಣದ ರಾಡ್‌ಗಳ ಮಧ್ಯೆ ಹೆಚ್ಚಿನ ಅಂತರವಿದೆ. ಈ ಜಾಗದಲ್ಲಿ ಮಕ್ಕಳು ಬೀಳುವ ಅಪಾಯವಿದೆ. ಸುತ್ತಲೂ ಬಲೆಯನ್ನಾದರೂ ಅಳವಡಿಸಬೇಕು
– ರವಿ, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.