ಬೆಂಗಳೂರು: ‘ನಿಸಾರ್ ಅಹಮದ್ ಅವರು ತಮ್ಮ ‘ನಿತ್ಯೋತ್ಸವ’ ಕವಿತೆಯ ಮೂಲಕ ಭಾವಗೀತೆಗಳಿಗೆ ನೀಡಿದ ಹೊಸ ಆಯಾಮವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಲಕ್ಷ್ಮೀನಾರಾಯಣ ಭಟ್ಟರಿಗೆ ಸಲ್ಲುತ್ತದೆ. ಸುಮಧುರ ಭಾವಗೀತೆಗಳಿಂದಲೇ ಅವರು ಜನಸಾಮಾನ್ಯರಿಗೆ ಆಪ್ತರಾದರು’ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ತಿಳಿಸಿದರು.
ಬಿ.ಎಂ.ಶ್ರೀ. ಪ್ರತಿಷ್ಠಾನವು ನಗರದಲ್ಲಿ ಮಂಗಳವಾರ ಆಯೋಜಿಸಿದ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
‘ಉತ್ತರ ಕರ್ನಾಟಕದ ಭಾಗಗಳಲ್ಲಿ ಪರಿಚಿತವಾಗಿದ್ದ ಸಂತ ಶಿಶುನಾಳ ಶರೀಫ್ ಸಾಹೇಬರ ಅನುಭಾವಗೀತೆಗಳನ್ನು ಸಂಗ್ರಹಿಸಿದ ಭಟ್ಟರು, ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ಇಡೀ ನಾಡಿಗೆ ತಲುಪಿಸಿದರು. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಮುಂತಾದ ಖ್ಯಾತ ಗಾಯಕರಿಂದ ಅವುಗಳನ್ನು ಹಾಡಿಸಿ, ಕನ್ನಡಿಗರೆಲ್ಲರ ನಾಲಿಗೆಯ ಮೇಲೂ ಅವು ನಲಿಯುವಂತೆ ಮಾಡಿದರು. ಇದರಿಂದಾಗಿ ಅವರಿಗೆ ‘ಶರೀಫ್ ಭಟ್ಟ’ ಎಂಬ ಬಿರುದು ಕೂಡ ಸಂದಿತ್ತು. ಇಂದು ರೇಡಿಯೊ, ಟಿವಿ, ಧ್ವನಿಸಾಂದ್ರಿಕೆಗಳು ಮತ್ತು ಅಂತರ್ಜಾಲದಲ್ಲಿ ಅತ್ಯಂತ ಪ್ರಚಲಿತವಾಗಿರುವುದು ಹೆಚ್ಚಾಗಿ ಅವರ ಭಾವಗೀತೆಗಳೇ ಆಗಿವೆ’ ಎಂದರು.
ಲೇಖಕಿ ವಿಜಯಾ ಸುಬ್ಬರಾಜ್, ‘ನಾನು ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ ಭಟ್ಟರ ವಿದ್ಯಾರ್ಥಿಯಾಗಿದ್ದೆ. ಅವರು ಅತ್ಯುತ್ತಮವಾದ ಪ್ರಾಧ್ಯಾಪಕರೂ ಆಗಿದ್ದರು. ಛಂದಸ್ಸುಗಳನ್ನು ಮನಮುಟ್ಟುವಂತೆ ಬೋಧಿಸುತ್ತಿದ್ದರು. ಬರವಣಿಗೆಯ ಬಗ್ಗೆ ಕೂಡ ನನಗೆ ಪ್ರೋತ್ಸಾಹಿಸುತ್ತಿದ್ದರು. ಅನಂತಮೂರ್ತಿ ಅವರ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನ ವಿಮರ್ಶೆಯನ್ನು ಮೆಚ್ಚಿಕೊಂಡಿದ್ದರು’ ಎಂದು ತಿಳಿಸಿದರು.
ವಿಶ್ವದಾದ್ಯಂತ ಮನ್ನಣೆ: ಗಾಯಕ ವೈ.ಕೆ. ಮುದ್ದುಕೃಷ್ಣ, ‘ಸುಗಮ ಸಂಗೀತ ಕ್ಷೇತ್ರವು ಭಟ್ಟರನ್ನು ಎಂದಿಗೂ ಮರೆಯುವಂತಿಲ್ಲ. ಅವರಿಂದಾಗಿಯೇ ಸುಗಮ ಸಂಗೀತ ಕ್ಷೇತ್ರದಲ್ಲಿ 70ನೇ ದಶಕದ ಅಂತ್ಯದಲ್ಲಿ ಧ್ವನಿಸುರುಳಿಯ ಅಲೆ ಪ್ರಾರಂಭವಾಯಿತು. ಇದರಿಂದಾಗಿ ಭಾವಗೀತೆಗಳು ಜನಮಾನಸ ತಲುಪಿ, ಮೆಚ್ಚುಗೆಗೆ ಪಾತ್ರವಾದವು. ಕನ್ನಡದ ಭಾವಗೀತೆ ಗಾಯಕರು ಇಡೀ ಪ್ರಪಂಚವನ್ನು ಸುತ್ತುತ್ತಿದ್ದಾರೆ. ಇದಕ್ಕೆ ಮೂಲ ಕಾರಣೀಭೂತರು ಭಟ್ಟರು’ ಎಂದು ಹೇಳಿದರು.
ವಿಮರ್ಶಕ ಬಸವರಾಜ ಕಲ್ಗುಡಿ , ‘ಭಟ್ಟರ ವಿದ್ಯಾರ್ಥಿಯಾಗಿದ್ದ ನಾನು ಬಳಿಕ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದೆ. ವೈಚಾರಿಕ, ತಾಂತ್ರಿಕ ಕಾರಣಗಳಿಗಾಗಿ ಅವರೊಂದಿಗೆ ಜಗಳಗಳೂ ಆಗಿದ್ದವು. ಅವರು ತರಗತಿಗಳನ್ನು ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ಅವರು ಭಾವಗೀತೆಗೆ ಹೊರಳಿದ್ದು ತಪ್ಪಲ್ಲ. ಆದರೆ, ಕವಿತ್ವವನ್ನು ಕಳೆದುಕೊಳ್ಳಬಾರದಿತ್ತು. ಕವಿತ್ವದ ಶಕ್ತಿ ಉಳಿಸಿಕೊಂಡಿದ್ದರೆ ಬಹಳ ಒಳ್ಳೆಯ ಕವಿಯಾಗುತ್ತಿದ್ದರು. ಆದರೆ, ಭಾವಗೀತೆಯ ಕವಿಯಾಗಿ ಉಳಿದರು’ ಎಂದರು.
ಸಾಹಿತಿಗಳಾದ ಹಂ.ಪ. ನಾಗರಾಜಯ್ಯ ಹಾಗೂ ಎಂ.ಎಚ್. ಕೃಷ್ಣಯ್ಯ ಅವರು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.