ADVERTISEMENT

ಸಿದ್ಧಲಿಂಗಯ್ಯ ಹೆಸರು ಚಿರಸ್ಥಾಯಿಗೆ ಅಭಿಮಾನಿಗಳ ಶ್ರಮ: ಜಾಗಕ್ಕೆ ಸಿಗದ ಮಂಜೂರಾತಿ

ಆದಿತ್ಯ ಕೆ.ಎ
Published 12 ಜುಲೈ 2022, 4:04 IST
Last Updated 12 ಜುಲೈ 2022, 4:04 IST
ಸಿದ್ಧಲಿಂಗಯ್ಯ
ಸಿದ್ಧಲಿಂಗಯ್ಯ   

ಬೆಂಗಳೂರು: ‘ಬಂಡಾಯ ಕವಿ’ ದಿವಂಗತ ಸಿದ್ಧಲಿಂಗಯ್ಯ ಹೆಸರನ್ನು ಚಿರಸ್ಥಾಯಿಗೊಳಿಸಲು ಅವರ ಅಭಿಮಾನಿಗಳು, ಸಾಹಿತ್ಯಾಸಕ್ತರು ಮುಂದಾಗಿದ್ದಾರೆ.

ಅವರ ಹೆಸರಿನಲ್ಲಿ ಗ್ರಂಥಾಲಯ, ಸಾಂಸ್ಕೃತಿಕ ಭವನವನ್ನು ರಾಜ ಧಾನಿಯಲ್ಲಿ ನಿರ್ಮಿಸುವ ಪ್ರಕ್ರಿಯೆಗಳು ಆರಂಭಗೊಂಡಿದ್ದರೂ, ಸಿದ್ಧಲಿಂಗಯ್ಯ ಟ್ರಸ್ಟ್‌ಗೆ ಜಾಗದ ಸಮಸ್ಯೆ ಎದುರಾಗಿದೆ.

ಸಿದ್ಧಲಿಂಗಯ್ಯ ನಿಧನ ರಾಗಿ ಜೂನ್‌ 11ಕ್ಕೆ ವರ್ಷ ತುಂಬಿತ್ತು. ಅವರ ಅಭಿಮಾನಿಗಳು ಟ್ರಸ್ಟ್‌ ಸ್ಥಾಪಿಸಿ ಸಾಮಾ ಜಿಕ ಕಾರ್ಯದಲ್ಲಿ ತೊಡಗಿ ದ್ದಾರೆ. ಆ ಟ್ರಸ್ಟ್‌ ಈಗ ಮಹತ್ವದ ಯೋಜನೆಗೆ ಕೈಹಾಕಿದ್ದರೂ ಜಾಗ ಮಂಜೂರಾಗದೇ ಗ್ರಂಥಾಲಯ, ಸಾಂಸ್ಕೃತಿಕ ಭವನ ನಿರ್ಮಾಣದ ಯೋಜನೆಗೆ ಹಿನ್ನಡೆ ಆಗಿದೆ.

ADVERTISEMENT

ಸಿದ್ಧಲಿಂಗಯ್ಯ ಅವರ ಶಿಷ್ಯಂದಿರೇ ಆಸಕ್ತಿ ವಹಿಸಿ ಕಂಗೇರಿ ಬಳಿ ಸೂಕ್ತ ಜಾಗ ಗುರುತಿಸಿ ಸಂಬಂಧಿಸಿದ ಕಡತವನ್ನು ಸರ್ಕಾರಕ್ಕೆ ರವಾನಿಸಿದ್ದರು. ಕಡತವು ಕಂದಾಯ ಸಚಿವರ ಕೈಸೇರಿತ್ತು. ‘ಜಾಗವು ವಿವಾದದಿಂದ ಕೂಡಿದೆ’ ಎಂದು ಹೇಳಿ ಹಿರಿಯ ಅಧಿಕಾರಿಗಳು ಕಂದಾಯ ಇಲಾಖೆಗೆ ಕಡತ ವಾಪಸ್ ಕಳು ಹಿಸಿದ್ದು, ಯೋಜನೆಗೆ ಆರಂಭಿಕ ಸಮಸ್ಯೆ ಎದುರಾಗಿದೆ.

ಈಗ ಗುರುತಿಸಿರುವ ಜಾಗ ಸೂಕ್ತ ವಾಗಿದೆ. ಕಡತವನ್ನು ಸಚಿವ ಸಂಪುಟದ ಮುಂದೆ ಬೇಗ ತಂದು ಜಾಗ ಮಂಜೂರು ಮಾಡಿಕೊಟ್ಟರೆ ಶೀಘ್ರವೇ ಕಾಮಗಾರಿ ಆರಂಭಿಸಲು ಟ್ರಸ್ಟ್‌ ತೀರ್ಮಾನಿಸಿದೆ.

ಸಿದ್ಧಲಿಂಗಯ್ಯ ಮನೆಯೇ ದೊಡ್ಡ ಗ್ರಂಥಾಲಯವಾಗಿದೆ. ಮನೆಯಲ್ಲಿರುವ ಎಲ್ಲ ಪುಸ್ತಕಗಳನ್ನೂ ಗ್ರಂಥಾಲಯದಲ್ಲಿ ಇರಿಸಲಾಗುವುದು. ಜೊತೆಗೆ ಆಸಕ್ತರೂ ತಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಕೊಡುಗೆಯಾಗಿಯೂ ನೀಡಬಹುದು. ಇದರಿಂದ ಸಂಶೋಧನಾ ಅಭ್ಯರ್ಥಿಗಳಿಗೆ ನೆರವಾಗಲಿದೆ ಎಂದು ಮೇಲ್ಮನೆ ಸದಸ್ಯ ಕೊಂಡಜ್ಜಿ ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ಧಲಿಂಗಯ್ಯ ಸ್ಮರಣೆಯ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವರಾದ ವಿ.ಸೋಮಣ್ಣ, ಮುನಿರತ್ನ ಟ್ರಸ್ಟ್‌ಗೆ ವೈಯಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಸರ್ಕಾರದಿಂದಲೂ ಅನುದಾನ ಕೊಡಿಸುವ ಭರವಸೆ ಕೊಟ್ಟಿದ್ದಾರೆ. ದಲಿತ ಪರ ಹೋರಾಟ, ಸಾಮಾಜಿಕ ಸಮಾನತೆಗೆ ಸಾಹಿತ್ಯ ರಚಿಸಿದ್ದರು. ಎಲ್ಲ ಕೃತಿಗಳನ್ನೂ ಗ್ರಂಥಾಲಯದಲ್ಲಿ ಇಡಲಾಗುವುದು’ ಎಂದು ಮೋಹನ್‌ ತಿಳಿಸಿದರು.

‘ತಂದೆಯವರು ಕೊಳೆಗೇರಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅವರಲ್ಲಿ ಬಹುತೇಕರು ಇಂದು ಉನ್ನತ ಹುದ್ದೆಗಳಲ್ಲಿದ್ದು, ಅವರೇ ಸಾಂಸ್ಕೃತಿಕ ಭವನ ನಿರ್ಮಿಸುವ ಇಚ್ಛೆ ಹೊಂದಿದ್ದಾರೆ’ ಎಂದು ಅವರ ಪುತ್ರಿ, ಡಾ.ಸಿದ್ಧಲಿಂಗಯ್ಯ ಸ್ಮಾರಕದ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಮಾನಸ ಹೇಳಿದರು.

ಬೆಂಗಳೂರು ನಗರದ ಕೆಂಗೇರಿ ಬಳಿ ಟ್ರಸ್ಟ್‌ನವರು ಗುರುತಿಸಿದ್ದ ಜಾಗ

ಕಡುಬಡತನದಲ್ಲಿ ಬೆಳೆದು ಬಂದ ಸಿದ್ಧಲಿಂಗಯ್ಯ ಅವರ ಜೀವನವೇ ಯುವಕರಿಗೆ ಸ್ಫೂರ್ತಿ.

- ಮೋಹನ್‌ ಕೊಂಡಜ್ಜಿ, ಮೇಲ್ಮನೆ ಸದಸ್ಯ

ಸಾಂಸ್ಕೃತಿಕ ಭವನದಲ್ಲಿ ನಾಟಕ ಪ್ರದರ್ಶನ, ಕ್ರಾಂತಿಗೀತೆ ಹಾಡಲು ಅವಕಾಶ ಸಿಗಲಿದೆ.

- ಡಾ.ಮಾನಸ, ಅಧ್ಯಕ್ಷೆ, ಡಾ.ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.