ಬೆಂಗಳೂರು: ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಅವರು ಸೋಮವಾರ ನಗರದ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲನೆ ನಡೆಸಿದರು.
2021ರಲ್ಲಿ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ಗಲಾಟೆಯಿಂದ ಈ ಪ್ರದೇಶವು ಕೋಮು ಸೂಕ್ಷ್ಮವಾಗಿದ್ದು, ಅಲ್ಲಿಗೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲನೆ ನಡೆಸಿದರು. ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಕಾವಲ್ ಭೈರಸಂದ್ರ, ಮೋದಿ ರಸ್ತೆ, ಶ್ಯಾಂಪುರ ಮುಖ್ಯರಸ್ತೆ, ಟ್ಯಾನರಿ ರಸ್ತೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಆ ಭಾಗದ ಡಿಸಿಪಿಯಿಂದಲೂ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ, ದಾಖಲೆಗಳಿಲ್ಲದ ವಸ್ತುಗಳ ವಶಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ವಿಧಾನಸಭೆ ಚುನಾವಣೆಯ ಮತದಾನ ದಿನವು ಸಮೀಪಿಸುತ್ತಿದ್ದು, ಎಚ್ಚರ ವಹಿಸುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚಿಸಿದರು.
ಪೂರ್ವವಲಯದ ಹೆಚ್ಚುವರಿ ಆಯುಕ್ತ ಚಂದ್ರಶೇಖರ್, ಡಿಸಿಪಿ ಭೀಮಾಶಂಕರ್ ಗುಳೇದ್ ಇತರೆ ಅಧಿಕಾರಿಗಳು ಹಾಜರಿದ್ದರು.
‘ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಸೂಚಿಸಿದ್ದೇನೆ. ದಾಖಲೆಗಳಿಲ್ಲದ ಹಣ ಹಾಗೂ ಇತರೆ ವಸ್ತುಗಳ ಸಾಗಾಟ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚಿಸಲಾಗಿದೆ. ನಗರದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ’ ಎಂದು ಪ್ರತಾಪ ರೆಡ್ಡಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.