ADVERTISEMENT

ಸಾರ್ವಜನಿಕ ಸಾರಿಗೆ ಬಳಸಿ, ದಟ್ಟಣೆ ನಿವಾರಿಸಿ: ಪೊಲೀಸ್ ಕಮಿಷನರ್‌ ಬಿ.ದಯಾನಂದ

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಪುಷ್ಪ ನೀಡಿದ ಪೊಲೀಸ್ ಕಮಿಷನರ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:14 IST
Last Updated 10 ನವೆಂಬರ್ 2024, 16:14 IST
ವಿಶ್ವ ಸಾರ್ವಜನಿಕ ಸಾರಿಗೆ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೊ ಚಾಲಕರಿಗೆ ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಎಂಬ ಕರಪತ್ರಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ನೀಡಿದರು. ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್, ಡಿಸಿಪಿ ಅನಿತಾ ಹದ್ದಣನವರ್‌ ಇದ್ದಾರೆ.  
ಪ್ರಜಾವಾಣಿ ಚಿತ್ರ
ವಿಶ್ವ ಸಾರ್ವಜನಿಕ ಸಾರಿಗೆ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೊ ಚಾಲಕರಿಗೆ ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಎಂಬ ಕರಪತ್ರಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ನೀಡಿದರು. ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್, ಡಿಸಿಪಿ ಅನಿತಾ ಹದ್ದಣನವರ್‌ ಇದ್ದಾರೆ.   ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾರ್ವಜನಿಕ ಸೇವೆ ಬಳಸುವ ಮೂಲಕ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ಕಡಿಮೆ ಮಾಡಲು ಸಹಕರಿಸಬೇಕು ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ಭಾನುವಾರ ಆಯೋಜಿಸಿದ್ದ ವಿಶ್ವ ಸಾರ್ವಜನಿಕ ಸಾರಿಗೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಸುಮಾರು ಒಂದೂವರೆಯಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿ ಆಗುತ್ತಿವೆ. ಶೇಕಡ 77ರಷ್ಟು ದ್ವಿಚಕ್ರ ವಾಹನಗಳು ಇವೆ. ವಾಹನಗಳ ಪಾರ್ಕಿಂಗ್ ವಹಿವಾಟು ನಡೆಸುವವರ ಹಾವಳಿಯೂ ಹೆಚ್ಚಾಗಿದೆ. ಇದರಿಂದ ಅಪಘಾತಗಳು ಹೆಚ್ಚಾಗುವ ಸಂಭವ ಇದೆ. ಖಾಸಗಿ ಕಾರು, ದ್ವಿಚಕ್ರ ವಾಹನಗಳನ್ನು ಹೆಚ್ಚು ಅವಲಂಬಿಸಿರುವ ಕಾರಣ ಸಂಚಾರ ದಟ್ಟಣೆ ಜತೆಗೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ADVERTISEMENT

‘ಖಾಸಗಿ ಸಂಚಾರ ಮಿತಿಗೊಳಿಸಿ, ಸಾರ್ವಜನಿಕ ಸಾರಿಗೆ ಉತ್ತೇಜಿಸಿ’ ಎಂಬ ಅಭಿಯಾನ ಆರಂಭಿಸಿದ್ದು, ಕರಪತ್ರದಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ಪ್ರತಿಜ್ಞೆ ಮಾಡಬೇಕು ಎಂದರು.

ಸಾರ್ವಜನಿಕ ಸಾರಿಗೆ ಸೇವೆಗಳಾದ ಕೆಎಸ್‌ಆರ್‌ಟಿಸಿ ಬಸ್, ಬಿಎಂಟಿಸಿ, ಮೆಟ್ರೊ, ಆಟೊ, ಕ್ಯಾಬ್ ಹೆಚ್ಚು ಬಳಸಬೇಕು. ಸಂಚಾರ ದಟ್ಟಣೆ ಕಡಿಮೆ ಮಾಡಲು ಪೊಲೀಸರ ಜತೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬಡವರು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಬಿಎಂಟಿಸಿ ನಿತ್ಯ ಲಕ್ಷಕ್ಕೂ ಅಧಿಕ ಟ್ರಿಪ್ ಸಂಚರಿಸುತ್ತಿದೆ. ಶ್ರೀಮಂತರು, ಸ್ಥಿತಿವಂತರು ಖಾಸಗಿ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಿದಾಗ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಪ್ರಕರಣಗಳು ಕಡಿಮೆ ಆಗುತ್ತಿಲ್ಲ ಎಂದರು.

ಇದೇ ವೇಳೆ ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಜಾಗೃತಿ ಮೂಡಿಸಲು ಆಟೊ ಚಾಲಕರಿಗೆ ಕರಪತ್ರಗಳನ್ನು ನೀಡಲಾಯಿತು. ಅನ್ಯ ಭಾಷಿಗರು ಕನ್ನಡ ಕಲಿಕೆಗೆ ಸಹಕಾರಿಯಾಗುವಂತೆ ಕರಪತ್ರದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಬಿಎಂಟಿಸಿ ಬಸ್‌ ಪ್ರಯಾಣಿಕರಿಗೆ ಗುಲಾಬಿ ಹೂವುಗಳನ್ನು ಕಮಿಷನರ್ ನೀಡಿದರು.

ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್, ಬಿಎಂಟಿಸಿ ಅಧಿಕಾರಿ ವಿಲ್ಸನ್‌, ಡಿಸಿಪಿ ಅನಿತಾ ಹದ್ದಣನವರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.