ಬೆಂಗಳೂರು: ‘ಆಟೊ ಹಾಗೂ ಬೈಕ್ ಸವಾರರಿಗೆ ಸಂಚಾರ ಶಿಸ್ತುಪಥದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ತಪ್ಪು ತಿದ್ದಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಎಚ್ಚರಿಸಿದರು.
ಸಾಮಾಜಿಕ ಮಾಧ್ಯಮ ‘ಟ್ವಿಟರ್’ನಲ್ಲಿ ಶನಿವಾರ ಜನರೊಂದಿಗೆ ಸಂವಾದ ನಡೆಸಿದ ಕಮಿಷನರ್, ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
‘ಆಟೊ ಚಾಲಕರು ಹಾಗೂ ಬೈಕ್ ಸವಾರರು, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾರೆ. ಶಿಸ್ತುಪಥ ನಿಯಮ ಪಾಲಿಸುವುದಿಲ್ಲ. ಇದರಿಂದಾಗಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಪ್ರಶ್ನಿಸಿದರೆ, ಆಟೊ ಚಾಲಕರು ಹಾಗೂ ಬೈಕ್ ಸವಾರರು ಜಗಳ ಮಾಡುತ್ತಾರೆ’ ಎಂದು ಶ್ರೀಕಾಂತ್ ಎಂಬುವರು ದೂರಿದರು.
ಕಮಿಷನರ್, ‘ಶಿಸ್ತುಪಥ ನಿಯಮ ಪಾಲನೆ ಮಾಡದಿರುವುದು ದುರಾದೃಷ್ಟಕರ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲಾಗುತ್ತಿದೆ’ ಎಂದರು.
‘ಆಟೊ ಚಾಲಕರು ಹಾಗೂ ಕೆಲ ಸಂಘಟನೆ ಸದಸ್ಯರು, ಕಾನೂನು ಕೈಗೆತ್ತಿಕೊಂಡು ಜನರ ಮೇಲೆ ದರ್ಪ ಮೆರೆಯುತ್ತಿದ್ದಾರೆ’ ಎಂದು ವಿವೇಕ್ ದೂರಿದರು.
ಕಮಿಷನರ್, ‘ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ದೂರು ನೀಡಿದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ರಸ್ತೆಯಲ್ಲಿ ಸುಖಾಸುಮ್ಮನೇ ವಾಹನಗಳನ್ನು ಅಡ್ಡಗಟ್ಟಿ ಗಲಾಟೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರ ಹೆಸರುಗಳನ್ನು ರೌಡಿಪಟ್ಟಿಗೆ ಸೇರಿಸಲಾಗುತ್ತಿದೆ. ನಮ್ಮ 112 ಸಂಖ್ಯೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಜನರು ತುರ್ತು ಸಂದರ್ಭಗಳಲ್ಲಿ ಕರೆ ಮಾಡಬಹುದು’ ಎಂದು ಕಮಿಷನರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.