ಬೆಂಗಳೂರು: ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿ ಉದ್ಯಮಿಯೊಬ್ಬರಿಗೆ ಜೀವಬೆದರಿಕೆಯೊಡ್ಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳಿಬ್ಬರನ್ನು ಕಾಲಿಗೆ ಗುಂಡು ಹೊಡೆದು ಸೋಲದೇವನಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡಿನ ಮೊಹಮ್ಮದ್ ರಿಯಾಜ್ (21) ಹಾಗೂ ಮೊಹಮ್ಮದ್ ಬಾಸಿತ್ (23) ಬಂಧಿತರು. ಗುಂಡೇಟಿನಿಂದ ಗಾಯಗೊಂಡಿರುವ ಇವರನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಟಿ.ದಾಸರಹಳ್ಳಿಯಲ್ಲಿ ಸೋಮವಾರ ರಾತ್ರಿ ನಾಲ್ಕು ದ್ವಿಚಕ್ರ ವಾಹನಗಳಿಗೆ ಆರೋಪಿಗಳು ಬೆಂಕಿ ಹಚ್ಚಿದ್ದರು. ಅಕ್ಕ–ಪಕ್ಕದ ಮನೆಯ ಗೋಡೆಗೂ ಬೆಂಕಿ ತಗುಲಿತ್ತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಗಸ್ತಿನಲ್ಲಿದ್ದ ಸಿಬ್ಬಂದಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.
‘ಮಂಗಳವಾರ ಬೆಳಿಗ್ಗೆಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಬಳಿಯ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಇರುವ ಮಾಹಿತಿ ಲಭ್ಯವಾಗಿತ್ತು. ಇನ್‌ಸ್ಪೆಕ್ಟರ್ ಸಿ.ಬಿ ಶಿವಸ್ವಾಮಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಸಿಬ್ಬಂದಿ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಆರೋಪಿಗಳನ್ನು ಹಿಡಿಯಲು ಹೋಗಿದ್ದರು. ಅದೇ ವೇಳೆ ಆರೋಪಿಗಳು ಚಾಕುವಿನಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು.’
‘ಹಲ್ಲೆ ತಡೆಯಲು ಹೋದ ಇನ್‌ಸ್ಪೆಕ್ಟರ್, ಶರಣಾಗುವಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದರು. ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದರು. ಅವರಿಬ್ಬರ ಕಾಲಿಗೆ ಇನ್‌ಸ್ಪೆಕ್ಟರ್ ಗುಂಡು ಹಾರಿಸಿದರು’ ಎಂದು ಶಶಿಕುಮಾರ್ ವಿವರಿಸಿದರು.
‘ಗಾಯಗೊಂಡು ಬಿದ್ದ ಆರೋಪಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗೊಂಡ ಸಿಬ್ಬಂದಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
₹ 50 ಲಕ್ಷಕ್ಕೆ ಬೇಡಿಕೆ: ‘ಟಿ. ದಾಸರಹಳ್ಳಿ ನಿವಾಸಿ ಆರ್.ಶ್ರೀನಿವಾಸ್ ಉರ್ಫ್ ಬಿಟಿವಿ ರಾಜು ಎಂಬುವರು ಕುಡಿಯುವ ನೀರಿನ ಘಟಕ ನಡೆಸುತ್ತಿದ್ದಾರೆ. ಅವರ ಮಗ ಶರತ್‌ರಾಜ್ ಐಷಾರಾಮಿ ಕಾರು ಹಾಗೂ ಬೈಕ್‌ಗಳನ್ನು ಇಟ್ಟುಕೊಂಡಿದ್ದಾರೆ. ಅವರನ್ನು ಅಪಹರಣ ಮಾಡಿ ಹಣ ಸಂಪಾದಿಸಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಶ್ರೀನಿವಾಸ್ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದ ಆರೋಪಿಗಳು, ‘₹ 50 ಲಕ್ಷ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆಯೊಡ್ಡಿದ್ದರು. ಅದಕ್ಕೆ ಶ್ರೀನಿವಾಸ್ ತಲೆಕೆಡಿಸಿಕೊಂಡಿರಲಿಲ್ಲ. ಅವರಲ್ಲಿ ಭಯ ಹುಟ್ಟಿಸುವುದಕ್ಕಾಗಿಯೇ ಆರೋಪಿಗಳು ಮನೆ ಬಳಿ ತೆರಳಿ ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿದ್ದರು’ ಎಂದರು.
ಎಗ್ ರೈಸ್ ಅಂಗಡಿಯಲ್ಲಿ ಕೆಲಸ
‘ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದ ರಿಯಾಜ್, ಟಿ. ದಾಸರಹಳ್ಳಿಯಲ್ಲಿರುವ ಸಂಬಂಧಿಯೊಬ್ಬರ ಎಗ್ ರೈಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಬಾಸಿತ್ ವಾರದ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ’ ಎಂದು ಪೊಲೀಸರು ಹೇಳಿದರು.
‘ಸ್ನೇಹಿತರಾಗಿದ್ದ ಅವರಿಬ್ಬರು ನಿತ್ಯವೂಶರತ್‌ರಾಜ್ ಓಡಾಡುವುದನ್ನು ನೋಡುತ್ತಿದ್ದರು. ಹಣ ಸಂಪಾದನೆ ಮಾಡುವುದಕ್ಕಾಗಿ ಒಟ್ಟಿಗೆ ಸೇರಿ ಸಂಚು ರೂಪಿಸಿದ್ದರು. ತಮಿಳುನಾಡಿನಲ್ಲಿ ಅವರ ವಿರುದ್ಧ ಏನಾದರೂ ಪ್ರಕರಣಗಳು ದಾಖಲಾಗಿವೆಯಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.