ಬೆಂಗಳೂರು: ಮನೆ ಆವರಣದಲ್ಲಿ ಮಾಲೀಕರು ಬಚ್ಚಿಡುತ್ತಿದ್ದ ಕೀ ಬಳಸಿ, ಚಿನ್ನಾಭರಣ ದೋಚಿ ಪರಾರಿ ಆಗುತ್ತಿದ್ದ ಆರೋಪಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಟ್ಫೀಲ್ಡ್ ನಿವಾಸಿ ಪ್ರದೀಪ್ (30) ಬಂಧಿತ.
ಆರೋಪಿಯಿಂದ ₹10 ಲಕ್ಷ ಮೌಲ್ಯದ 152 ಗ್ರಾಂ. ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಡೆಲಿವರಿ ಬಾಯ್ ಆಗಿ ಆರೋಪಿ ಕೆಲಸ ಮಾಡುತ್ತಿದ್ದ. ಮನೆಗಳಿಗೆ ಹೋದಾಗ ಮಾಲೀಕರು ಯಾವ ಜಾಗದಲ್ಲಿ ಕೀ ಇಡುತ್ತಾರೆ ಎಂದು ಗಮನಿಸುತ್ತಿದ್ದ. ಯಾರೂ ಇಲ್ಲದಾಗ ಬಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಜ್ಯೂಸ್ ಅಂಗಡಿ ಮಾಲೀಕರೊಬ್ಬರು ಸೆ.27ರಂದು ಮನೆಗೆ ಬೀಗ ಹಾಕಿ, ಹೊರಗಡೆಯ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಕೀ ಇಟ್ಟು ಹೋಗಿದ್ದರು. ಪ್ರದೀಪ್ ಆ ಕೀ ಬಳಸಿ ಬೀಗ ತೆಗೆದು ಮನೆಗೆ ನುಗ್ಗಿ 8 ಗ್ರಾಂ. ಚಿನ್ನ ಹಾಗೂ ₹10 ಸಾವಿರ ನಗದು ದೋಚಿದ್ದ. ಈತನ ಬಂಧನದಿಂದ ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆರು ಕಳ್ಳತನ ಪ್ರಕರಣಗಳು ಪತ್ತೆ ಆಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.