ADVERTISEMENT

ಕೆ.ಆರ್. ಪುರ: ನೇತ್ರಾವತಿ ಕೊಲೆ–ಜನ್ಮದಾತನ ಉಳಿಸಲು ‘ತಿಂಡಿ’ ಕಥೆ ಕಟ್ಟಿದ್ದ ಮಗ!

ಕೆ.ಆರ್. ಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ನೇತ್ರಾವತಿ (40) ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 3:12 IST
Last Updated 7 ಫೆಬ್ರುವರಿ 2024, 3:12 IST
<div class="paragraphs"><p>ಚಂದ್ರಪ್ಪ, ಕೊಲೆಯಾದ&nbsp;ನೇತ್ರಾವತಿ </p></div>

ಚಂದ್ರಪ್ಪ, ಕೊಲೆಯಾದ ನೇತ್ರಾವತಿ

   

ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ನೇತ್ರಾವತಿ (40) ಕೊಲೆ ಪ್ರಕರಣದ ತನಿಖೆ ಕೈಗೊಂಡು 17 ವರ್ಷದ ಮಗನನ್ನು ಬಂಧಿಸಿದ್ದ ಪೊಲೀಸರು, ಇದೀಗ ಮೃತರ ಪತಿ ಚಂದ್ರಪ್ಪ (48) ಅವರನ್ನೂ ಸೆರೆ ಹಿಡಿದಿದ್ದಾರೆ.

‘ಜಸ್ಟಿಸ್ ಭೀಮಯ್ಯ ಬಡಾವಣೆ ನಿವಾಸಿ ನೇತ್ರಾವತಿ ಅವರನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ತಿಂಡಿ ಮಾಡಲಿಲ್ಲವೆಂಬ ಕಾರಣಕ್ಕೆ ಜಗಳ ತೆಗೆದು ಕೊಲೆ ಮಾಡಿದ್ದಾಗಿ ಮಗ ತಪ್ಪೊಪ್ಪಿಕೊಂಡಿದ್ದ. ಸ್ಥಳದಲ್ಲಿದ್ದ ರಾಡ್‌ ಮೇಲೆ ಇಬ್ಬರ ಬೆರಳಚ್ಚು ಇರುವುದು ಪರಿಶೀಲನೆಯಿಂದ ಗೊತ್ತಾಗಿತ್ತು. ಮಗನನ್ನು ಪುನಃ ವಿಚಾರಣೆ ನಡೆಸಿದಾಗ, ತಂದೆಯೂ ಕೃತ್ಯದಲ್ಲಿ ಭಾಗಿಯಾಗಿದ್ದು ತಿಳಿಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಗನ ಹೇಳಿಕೆ ಆಧರಿಸಿ ತಂದೆ ಚಂದ್ರಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ. ಚಂದ್ರಪ್ಪನನ್ನು ಬಂಧಿಸಲಾಗಿದ್ದು, ಈತನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದು ಹೇಳಿದರು.

ನಾಲ್ವರ ಕುಟುಂಬ: ‘ಮುಳಬಾಗಿಲಿನ ಕೃಷಿಕ ಚಂದ್ರಪ್ಪ ಹಾಗೂ ನೇತ್ರಾವತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಬೇರೆ ಊರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಗ ಡಿಪ್ಲೊಮಾ ಓದುತ್ತಿದ್ದು, ತಂದೆ–ತಾಯಿ ಜೊತೆಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕೃಷಿ ಮಾಡುವುದು ಬೇಡವೆಂದಿದ್ದ ನೇತ್ರಾವತಿ, ಬೆಂಗಳೂರಿಗೆ ಸ್ಥಳಾಂತರವಾಗೋಣವೆಂದು ಪಟ್ಟು ಹಿಡಿದಿದ್ದರು. ಪತ್ನಿ ಹಠಕ್ಕೆ ಸೋತಿದ್ದ ಚಂದ್ರಪ್ಪ, ಕೆ.ಆರ್. ಪುರಕ್ಕೆ ಬಂದು ಜಸ್ಟಿಸ್‌ ಭೀಮಯ್ಯ ಬಡಾವಣೆಯಲ್ಲಿ ಮನೆ ಮಾಡಿದ್ದ. ಸಾಫ್ಟ್‌ವೇರ್‌ ಕಂಪನಿಯೊಂದರ ಸ್ವಚ್ಛತೆ ಮೇಲ್ವಿಚಾರಕರಾಗಿ ನೇತ್ರಾವತಿ ಕೆಲಸಕ್ಕೆ ಸೇರಿದ್ದರು. ಚಂದ್ರಪ್ಪ, ಕೃಷಿ ಮುಂದುವರಿಸಿ ಆಗಾಗ ಊರಿಗೆ ಹೋಗಿ ಬರುತ್ತಿದ್ದರು’ ಎಂದು ಹೇಳಿದರು.

ಬದಲಾಗಿದ್ದ ಜೀವನ ಶೈಲಿ: ‘ನೇತ್ರಾವತಿ ಅವರ ಜೀವನ ಶೈಲಿ ಬದಲಾಗಿತ್ತು. ಪತಿ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಸಹೋದ್ಯೋಗಿಗಳ ಜೊತೆ ಆಗಾಗ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು. ಹಣವನ್ನೂ ಹೆಚ್ಚು ಖರ್ಚು ಮಾಡುತ್ತಿದ್ದರು. ಇದರಿಂದ ಚಂದ್ರಪ್ಪ ಹಾಗೂ ಮಕ್ಕಳು ಕೋಪಗೊಂಡಿದ್ದರು. ಇದೇ ವಿಚಾರಕ್ಕೆ ಮನೆಯಲ್ಲೂ ಆಗಾಗ ಜಗಳವಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

ರಾಡ್‌ನಿಂದ ಹೊಡೆದಿದ್ದ ತಂದೆ, ಕಥೆ ಕಟ್ಟಿದ ಮಗ: ‘ಪ್ರವಾಸಕ್ಕೆ ಹೋಗಿದ್ದ ನೇತ್ರಾವತಿ, ಗುರುವಾರ (ಫೆ. 1) ಸಂಜೆ ಮನೆಗೆ ವಾಪಸು ಬಂದಿದ್ದರು. ಚಂದ್ರಪ್ಪ ಹಾಗೂ ಮಗ, ತಾಯಿಯನ್ನು ಪ್ರಶ್ನಿಸಿದ್ದರು. ಇದೇ ವೇಳೆ ಜಗಳ ಶುರುವಾಗಿತ್ತು. ಸಿಟ್ಟಾದ ಚಂದ್ರಪ್ಪ, ರಾಡ್‌ನಿಂದ ನೇತ್ರಾವತಿ ತಲೆಗೆ ಹೊಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ನೇತ್ರಾವತಿ ಕುಸಿದು ಬಿದ್ದಿದ್ದರು. ರಾಡ್ ಕಸಿದುಕೊಂಡಿದ್ದ ಮಗ, ‘ಕೊಲೆ ಮಾಡಿದ್ದು ಒಳ್ಳೆಯದಾಯಿತು. ನೀನು ಇಲ್ಲಿ ಇರಬೇಡ. ಹೊರಟು ಹೋಗು. ನಾನು ಅಪ್ರಾಪ್ತ. ಈ ಕೊಲೆಯನ್ನು ನಾನೇ ಮಾಡಿರುವುದಾಗಿ ಪೊಲೀಸರಿಗೆ ಹೇಳುತ್ತೇನೆ. ನನಗೆ ಬಹಳ ವರ್ಷ ಶಿಕ್ಷೆ ಆಗುವುದಿಲ್ಲ. ಜೊತೆಗೆ, ಜೈಲಿನಲ್ಲಿ ಶಿಕ್ಷಣವೂ ದೊರೆಯುತ್ತದೆ’ ಎಂದು ಹೇಳಿದ್ದ. ಮಗನ ಮಾತು ಕೇಳಿ ತಂದೆ ಸ್ಥಳದಿಂದ ಹೊರಟು ಹೋಗಿದ್ದ. ನಂತರ, ಮಗನೂ ಮತ್ತೊಮ್ಮೆ ತಾಯಿ ತಲೆಗೆ ರಾಡ್‌ನಿಂದ ಹೊಡೆದಿದ್ದ. ನೇತ್ರಾವತಿ ಸ್ಥಳದಲ್ಲೇ ಮೃತಪಟ್ಟಿದ್ದರು.’

‘ಫೆ. 2ರಂದು ಬೆಳಿಗ್ಗೆ ಠಾಣೆಗೆ ಕರೆ ಮಾಡಿದ್ದ ಮಗ, ತಿಂಡಿ ಮಾಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನು ಕೊಂದಿರುವುದಾಗಿ ಹೇಳಿದ್ದ. ಆತನೇ ಕೊಲೆ ಮಾಡಿರಬಹುದೆಂದು ತಿಳಿದು ಬಾಲಕನನ್ನು ವಶಕ್ಕೆ ಪಡೆಯಲಾಗಿತ್ತು. ರಾಡ್‌ ಬೆರಳಚ್ಚು ಸುಳಿವಿನಿಂದ ತಂದೆಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

ಮುಳಬಾಗಿಲು ಎಂದಿದ್ದ ತಂದೆ: ‘ಮಗನನ್ನು ವಶಕ್ಕೆ ಪಡೆದಿದ್ದ ದಿನವೇ ತಂದೆಯನ್ನೂ ವಿಚಾರಣೆ ನಡೆಸಲಾಗಿತ್ತು. ಆತ ಮುಳಬಾಗಿಲಿನಲ್ಲಿರುವುದಾಗಿ ಹೇಳಿದ್ದ. ಮೊಬೈಲ್ ನೆಟ್‌ವರ್ಕ್‌ ಪರಿಶೀಲಿಸಿದಾಗ ಅನುಮಾನ ಬಂದಿತ್ತು. ಆದರೆ, ಖಚಿತ ಪುರಾವೆ ಸಿಕ್ಕಿರಲಿಲ್ಲ. ಬೆರಳಚ್ಚು ಗೊತ್ತಾಗುತ್ತಿದ್ದಂತೆ ಆತನೂ ಆರೋಪಿ ಎಂಬುದು ತಿಳಿಯಿತು’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.