ADVERTISEMENT

ಪೊಲೀಸರ ಹೆಸರಿನಲ್ಲಿ 2 ಲಕ್ಷ ಸುಲಿಗೆ: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪೊಲೀಸ್ ಭಾತ್ಮಿದಾರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:38 IST
Last Updated 23 ಏಪ್ರಿಲ್ 2024, 15:38 IST
<div class="paragraphs"><p>ಸುಲಿಗೆ</p></div>

ಸುಲಿಗೆ

   

ಬೆಂಗಳೂರು: ‘ನಾವು ಪೊಲೀಸರು’ ಎಂಬುದಾಗಿ ಹೇಳಿಕೊಂಡು ಗುಜರಿ ಮಳಿಗೆ ಮಾಲೀಕನನ್ನು ಬೆದರಿಸಿ ₹ 2 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಎಸ್. ನಿವಾಸ್ ಎಂಬುವವರನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಟ್ಟಂದೂರು ಅಗ್ರಹಾರ ಬಳಿಯ ಗುಜರಿ ಮಳಿಗೆ ಮಾಲೀಕ ಅಖ್ತಿರ್ ಅಲಿ ಮೊಂಡಲ್ ಅವರು ಕೃತ್ಯದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ನಿವಾಸ್‌ನನ್ನು ಸೆರೆ ಹಿಡಿಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಆರೋಪಿ ನಿವಾಸ್, ಪೊಲೀಸ್ ಬಾತ್ಮಿದಾರ. ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಈತ ಪೊಲೀಸರಿಗೆ ಆಗಾಗ ಮಾಹಿತಿ ನೀಡುತ್ತಿದ್ದ. ಈತನೇ ಪೊಲೀಸರ ಹೆಸರಿನಲ್ಲಿ ಗುಜರಿ ಮಳಿಗೆಗೆ ಹೋಗಿ ಸುಲಿಗೆ ಮಾಡಿರುವ ಆರೋಪವಿದೆ.

ಪ್ರಕರಣ ದಾಖಲಿಸುವ ಬೆದರಿಕೆ: ‘ಆರೋಪಿ ನಿವಾಸ್ ಹಾಗೂ ಮೂವರು ಸಹಚರರು, ಕಾರಿನಲ್ಲಿ ಗುಜರಿ ಮಳಿಗೆಗೆ ಏಪ್ರಿಲ್ 17ರಂದು ಹೋಗಿದ್ದರು. ‘ನಾವು ಪೊಲೀಸರು. ಮಳಿಗೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲು ಬಂದಿದ್ದೇವೆ. ಪ್ರಕರಣ ದಾಖಲಿಸಬಾರದೆಂದರೆ ಹಣ ನೀಡಬೇಕು’ ಎಂಬುದಾಗಿ ಆರೋಪಿಗಳು ಬೇಡಿಕೆ ಇರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲವೆಂದು ಹೇಳಿದ್ದ ದೂರುದಾರ, ಹಣ ನೀಡಲು ನಿರಾಕರಿಸಿದ್ದರು. ದೂರುದಾರರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಒತ್ತಾಯದಿಂದ ತಮ್ಮ ಖಾತೆಗೆ ₹ 80 ಸಾವಿರ ವರ್ಗಾಯಿಸಿಕೊಂಡಿದ್ದರು. ಜೊತೆಗೆ, ಎಟಿಎಂ ಕಾರ್ಡ್ ಕಿತ್ತುಕೊಂಡು ಸ್ಥಳದಿಂದ ಹೊರಟು ಹೋಗಿದ್ದರು.’

‘ಅದೇ ಎಟಿಎಂ ಕಾರ್ಡ್‌ ಬಳಸಿ ಏಪ್ರಿಲ್ 18ರಂದು ಆರೋಪಿಗಳು ಹಣ ಡ್ರಾ ಮಾಡಿಕೊಂಡಿದ್ದರು. ದೂರುದಾರರಿಂದ ಒಟ್ಟು ₹ 2 ಲಕ್ಷ ದೋಚಿದ್ದರು’ ಎಂದು ಮೂಲಗಳು ತಿಳಿಸಿವೆ.

ಹಲವು ಕಡೆ ಸುಲಿಗೆ: ‘ಪೊಲೀಸ್ ಬಾತ್ಮಿದಾರ ಎಂಬುದಾಗಿ ಹೇಳಿಕೊಂಡು ಆರೋಪಿ ನಿವಾಸ್ ಹಲವು ಕಡೆಗಳಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಸದ್ಯ ಒಂದು ಪ್ರಕರಣ ದಾಖಲಾಗಿದೆ. ಯಾರಾದರೂ ದೂರು ನೀಡಿದರೆ, ಅದನ್ನೂ ಪರಿಗಣಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ಕೆಲ ಪೊಲೀಸರೂ ಭಾಗಿ: ‘ಆರೋಪಿ ನಿವಾಸ್ ಮೂಲಕ ಕೆಲ ಪೊಲೀಸರು ಹಣ ಪಡೆದುಕೊಂಡಿರುವ ಆರೋಪವಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.