ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ– ಮಗು ಮೃತಪಟ್ಟ ಪ್ರಕರಣದ ಪೊಲೀಸ್ ವಿಚಾರಣೆಗೆ ಗೈರಾಗಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಅಂಜುಂ ಪರ್ವೇಜ್, ಅನಾರೋಗ್ಯ ಕಾರಣ ನೀಡಿ ಕಾಲಾವಕಾಶ ಕೋರಿದ್ದಾರೆ.
ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಜ. 10ರಂದು ಬೆಳಿಗ್ಗೆ ಬೈಕ್ ಮೇಲೆ ಉರುಳಿಬಿದ್ದಿತ್ತು. ಬೈಕ್‌ನಲ್ಲಿ ಹೊರಟಿದ್ದ ತಾಯಿ ತೇಜಸ್ವಿನಿ ಸುಲಾಖೆ (28) ಹಾಗೂ ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು. ತೇಜಸ್ವಿನಿ ಅವರ ಪತಿ ಲೋಹಿತ್ ಕುಮಾರ್ ಸುಲಾಖೆ (33) ಹಾಗೂ ಮಗಳು ವಿಸ್ಮಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಘಟನಾ ಸ್ಥಳಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿದ್ದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಹೈದರಾಬಾದ್ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಬಿಎಂಆರ್‌ಸಿಎಲ್ ಎಂಜಿನಿಯರ್
ಗಳನ್ನು ವಿಚಾರಣೆ ನಡೆಸಿದ್ದರು. ಅವರ ಹೇಳಿಕೆಗೆ ಪೂರಕವಾದ ಮಾಹಿತಿ ಸಂಗ್ರಹಿಸಲು ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಅವರಿಗೆ ನೋಟಿಸ್ ನೀಡಿದ್ದರು. ಗುರುವಾರ (ಜ. 19) ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ಅನಾರೋಗ್ಯವೆಂದು ಹೇಳಿ ವಿಚಾರಣೆಗೆ ಗೈರಾಗಿರುವ ಫರ್ವೇಜ್, ‘ಕೆಲದಿನ ಕಾಲಾವಕಾಶ ನೀಡಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವಿಚಾರಣೆಗೆ ಬರುತ್ತೇನೆ’ ಎಂದು ಪೊಲೀಸರನ್ನು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ಅಂಜುಂ ಫರ್ವೇಜ್ ಅವರಿಗೆ ಎರಡನೇ ಬಾರಿ ನೋಟಿಸ್ ನೀಡಲಾಗುವುದು’ ಎಂದು ಹೇಳಿದರು.
‘ಘಟನಾ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಿರುವ ಐಐಎಸ್ಸಿ ಹಾಗೂ ಐಐಟಿ ತಜ್ಞರ ವರದಿಗಾಗಿ ಕಾಯುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.